ತಿರುವನಂತಪುರಂ: ಕೇರಳದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಸಿರುವ ಚಿನ್ನ ಕಳ್ಳ ಸಾಗಾಟ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ,ಎನ್ ಐ ಎ, ಹಿರಿಯ ಐಎಎಸ್ ಅಧಿಕಾರಿ ಶಿವಶಂಕರ್ ಅವರನ್ನು ವಿಚಾರಣೆಗೆ ಗುರಿಪಡಿಸಿದೆ. ಶಿವಶಂಕರ್ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಹಗರಣ ಬೆಳಕಿಗೆ ಬಂದ ಬಳಿಕ ಅವರನ್ನು ವರ್ಗಾಯಿಸಲಾಗಿತ್ತು.
ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಯಾಗಿಯೂ ಶಿವಶಂಕರ್ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಅಮಾನತು ಮಾಡಲಾಗಿದೆ. ಈ ಹಿಂದೆ ಕಸ್ಟಂಮ್ಸ್ ಅಧಿಕಾರಿಗಳು ಶಿವಶಂಕರ್ ಅವರನ್ನು ವಿಚಾರಣೆಗೆ ಗುರಿಪಡಿಸಿದ್ದರು. ಚಿನ್ನ ಕಳ್ಳ ಸಾಗಾಟದ ಪ್ರಮುಖ ಆರೋಪಿಗಳಾದ ಸ್ವಪ್ನಾ ಸುರೇಶ್ ,ಸಂದೀಪ್ ನಾಯರ್ ಮತ್ತು ಸರಿತ್ ಅವರ ಜತೆ ಶಿವಶಂಕರ್ ನಿಕಟ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ.
ಈ ಮಧ್ಯೆ ಪ್ರಕರಣದ ಪ್ರಮುಖ ಆರೋಪಿ ಎಂದು ಶಂಕಿಸಲಾಗಿರುವ ಉದ್ಯಮಿ ಪೈಸಲ್ ಫರೀದ್ ನನ್ನು ದುಬೈಯಿಂದ ಕರೆ ತರುವ ಪ್ರಯತ್ನವನ್ನು ಎನ್ ಐ ಎ ತೀವ್ರಗೊಳಿಸಿದೆ