newsics.com
ನವದೆಹಲಿ: ಸದ್ಯದಲ್ಲೇ ರೈಲು ಪ್ರಯಾಣ ದುಬಾರಿಯಾಗುವ ಸಾಧ್ಯತೆಯಿದೆ. ಸ್ಲೀಪರ್ ಕ್ಲಾಸ್ ಹಾಗೂ ಎಸಿ ರೈಲ್ವೆ ಪ್ರಯಾಣದ ಟಿಕೆಟ್ ದರ 10ರಿಂದ 35 ರೂಪಾಯಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಮುಂದಿನ ತಿಂಗಳು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಯಾಣಿಕ ಅಭಿವೃದ್ಧಿ ಶುಲ್ಕ(ಯುಡಿಎಫ್) ಹೆಚ್ಚಳ ಮಾಡುವ ಬಗ್ಗೆ ಅನುಮತಿ ನೀಡುವ ಸಾಧ್ಯತೆ ಇದೆ. ಇದರಿಂದಾಗಿ ಸ್ಲೀಪರ್ ಕ್ಲಾಸ್ ಹಾಗೂ ಎಸಿ ರೈಲ್ವೆ ಪ್ರಯಾಣದ ಟಿಕೆಟ್ ದರ 10ರಿಂದ 35 ರೂಪಾಯಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಯೂಸರ್ ಡೆವಲಪ್ ಮೆಂಟ್ ಫೀ (ಪ್ರಯಾಣಿಕ ಅಭಿವೃದ್ಧಿ ಶುಲ್ಕ) ರೈಲು ಪ್ರಯಾಣದ ವಿವಿಧ ಕೆಟಗರಿ ಹಾಗೂ ಕ್ಲಾಸ್’ಗಳಿಗೆ ಭಿನ್ನವಾಗಿರಲಿದೆ ಎಂದು ತಿಳಿದುಬಂದಿದೆ.
ರೈಲಿನ ಎಸಿ ಕ್ಲಾಸ್ ಪ್ರಯಾಣಿಕರು ಹೆಚ್ಚು ಶುಲ್ಕ ಪಾವತಿಸುತ್ತಾರೆ, ಸ್ಲೀಪರ್ ಕ್ಲಾಸ್ ಪ್ರಯಾಣಿಕರು ಕಡಿಮೆ ಯುಡಿಎಫ್ ಪಾವತಿಸಬೇಕಾಗುತ್ತದೆ. ಒಂದು ವೇಳೆ, ಯುಡಿಎಫ್ ಶುಲ್ಕ ಏರಿಕೆಯಾದರೆ ರೈಲು ಪ್ರಯಾಣದ ಟಿಕೆಟ್ ದರದಲ್ಲೂ ಏರಿಕೆಯಾಗಲಿದೆ. ಈಗ ಬಹುತೇಕ ಖಚಿತವಾಗಿರುವಂತೆ ಎಸಿ ಫಸ್ಟ್ ಟಯರ್- 35ರಿಂದ 40 ರೂ., ಎಸಿ ಟು ಟಯರ್- 30 ರೂ., ಎಸಿ ತ್ರಿ ಟಯರ್- 30 ರೂ., ಸ್ಲೀಪರ್ ಕ್ಲಾಸ್- 10 ರೂ.ಗಳಷ್ಟು ಹೆಚ್ಚಾಗಲಿದೆ. ಯುಡಿಎಫ್ ಶುಲ್ಕ ಖಾಸಗಿ ರೈಲ್ವೆ ನಿಲ್ದಾಣ ಬಳಸುವ ಪ್ರಯಾಣಿಕರಿಗೆ ಅನ್ವಯವಾಗಲಿದೆ.