newsics.com
ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ 21 ಮಂದಿ ಅಸುನೀಗಿದ್ದು, ಹಲವರು ನಾಪತ್ತೆಯಾಗಿದ್ದಾರೆ.
ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳ ಭೂಕುಸಿತ ಪ್ರದೇಶಗಳಲ್ಲಿ ರಕ್ಷಣೆ ಮತ್ತು ತೆರವು ಕಾರ್ಯಾಚರಣೆ ವೇಳೆ ಹೃದಯವಿದ್ರಾವಕ ದೃಶ್ಯಗಳು ಕಂಡುಬಂದಿವೆ. ತಾಯಿ ಮತ್ತು ಮಗುವಿನ ಮೃತದೇಹ ಪರಸ್ಪರ ತಬ್ಬಿಕೊಂಡಿರುವ ಸ್ಥಿತಿಯಲ್ಲೇ ಪತ್ತೆಯಾಗಿದೆ. ಇನ್ನೊಂದು ಕಂದಮ್ಮ ತೊಟ್ಟಿಲಿನಲ್ಲಿ ನಿದ್ರಿಸುತ್ತಿರುವಾಗಲೇ ಮೃತಪಟ್ಟಿದೆ.
ಕೊಟ್ಟಾಯಂನ ಕೂಟ್ಟಿಕ್ಕಲ್ ಎಂಬಲ್ಲಿ ಎರಡು ಕಡೆ ಭೂಕುಸಿತ ಪ್ರದೇಶಗಳಿಂದ ಒಂದೇ ಕುಟುಂಬದ ಆರು ಮಂದಿ ಸೇರಿದಂತೆ 12 ಮಂದಿಯ ಮೃತದೇಹವನ್ನು ಅವಶೇಷಗಳಡಿಯಿಂದ ಹೊರ ತೆಗೆಯಲಾಗಿದೆ.
ಇಡುಕ್ಕಿ ಜಿಲ್ಲೆಯ ಕೊಕ್ಕಯಾರ್ನಲ್ಲಿ ತಾಯಿ–ಇಬ್ಬರು ಮಕ್ಕಳು ಸೇರಿದಂತೆ ಆರು ಮೃತದೇಹಗಳು ಪತ್ತೆಯಾಗಿವೆ. ಒಬ್ಬ ಮಹಿಳೆ ಹಾಗೂ ಮಗು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಕೇರಳದ ಕೇಂದ್ರ ಹಾಗೂ ದಕ್ಷಿಣ ಭಾಗಗಳಲ್ಲಿ ಭಾನುವಾರ ಮಳೆ ತುಸು ಕಡಿಮೆಯಾಗಿದ್ದರೂ ಬುಧವಾರದಿಂದ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕಟ್ಟೆಚ್ಚರ ಘೋಷಿಸಲಾಗಿದೆ.
ಕೊಟ್ಟಾಯಂ ಮತ್ತು ಪತ್ತನಂತಿಟ್ಟ ಜಿಲ್ಲೆಯಲ್ಲಿ ಪ್ರವಾಹ ಇಳಿಕೆಯಾಗಿದ್ದರೂ ಅನೇಕ ಪ್ರದೇಶಗಳು ಜಲಾವೃತವಾಗಿಯೇ ಇವೆ.
ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.