ನವದೆಹಲಿ: ಗಡಿ ವಿಷಯಕ್ಕೆ ಸಂಬಂಧಪಟ್ಟಂತೆ ನೇಪಾಳ ಇತ್ತೀಚಿನ ದಿನಗಳಲ್ಲಿ ಚೀನಾದ ತಾಳಕ್ಕೆ ತಕ್ಕಂತೆ ಕುಣಿಯತ್ತಿದೆ. ಆದರೂ ನೆರೆಯ ರಾಷ್ಟ್ರ ನೇಪಾಳಕ್ಕೆ ಭಾರತ ಎರಡು ಅತ್ಯಾಧುನಿಕ ರೈಲು ಉಡುಗೊರೆಯಾಗಿ ನೀಡಿದೆ. ಇದು ಭಾರತದ ಕಾಳಜಿಗೆ ಕೈಗನ್ನಡಿಯಾಗಿದೆ.
ಬಿಹಾರದ ಜಯನಗರದಿಂದ ನೇಪಾಳದ ಧನುಶಾ ಜಿಲ್ಲೆಯಲ್ಲಿರುವ ಕುರ್ತಾ ಮಧ್ಯೆ ಈ ರೈಲು ಸಂಚರಿಸಲಿದೆ. ಕೊಂಕಣ ರೈಲು ನಿಗಮ ಈ ರೈಲು ನಿರ್ಮಿಸಿದ್ದು, ಚೆನ್ನೈನ ರೈಲು ನಿರ್ಮಾಣ ಕಾರ್ಖಾನೆಯಲ್ಲಿ ಇದನ್ನು ಸಿದ್ದಪಡಿಸಲಾಗಿತ್ತು.
ಭಾರತ- ನೇಪಾಳ ಗಡಿಯಲ್ಲಿರುವ ಸಾವಿರಾರು ಮಂದಿ ಇದರ ಪ್ರಯೋಜನ ಪಡೆಯಲಿದ್ದಾರೆ. ಕೊರೋನಾ ಮಹಾಮಾರಿಯ ಮಧ್ಯೆ ಕೂಡ ರೈಲಿನ ಮೊದಲ ಸಂಚಾರ ವೀಕ್ಷಿಸಲು ಸಾವಿರಾರು ಮಂದಿ ರೈಲು ನಿಲ್ದಾಣಗಳಲ್ಲಿ ಸೇರಿದ್ದರು.
ನೇಪಾಳದಲ್ಲಿ ಇದುವರೆಗೆ ಬ್ರಾಡ್ ಗೇಜ್ ರೈಲು ವ್ಯವಸ್ಥೆ ಜಾರಿಯಲ್ಲಿ ಇರಲಿಲ್ಲ. ಭಾರತದ ನೆರವಿನಿಂದ ಮೊದಲ ಬಾರಿಗೆ ಬ್ರಾಡ್ ಗೇಜ್ ರೈಲು ಸೇವೆ ಆರಂಭವಾಗಿದೆ.