ನವದೆಹಲಿ: ಪಾಕಿಸ್ತಾನದ ಲಾಹೋರ್ ನಲ್ಲಿರುವ ಐತಿಹಾಸಿಕ ಸಿಖ್ ಗುರುದ್ವಾರಗಳನ್ನು ಮಸೀದಿಗಳಾಗಿ ಬದಲಾಯಿಸುವ ಯೋಜನೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪಾಕಿಸ್ತಾನದ ಹೈ ಕಮೀಷನರ್ ಗೆ ಭಾರತ ತನ್ನ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ. ಗುರುದ್ವಾರಗಳನ್ನು ಸಂರಕ್ಷಿಸಬೇಕು ಮತ್ತು ಸೂಕ್ತ ವಾತಾವರಣ ನಿರ್ಮಿಸಬೇಕು ಎಂದು ಭಾರತ, ಪಾಕಿಸ್ತಾನವನ್ನು ಒತ್ತಾಯಿಸಿದೆ.
ಲಾಹೋರ್ ನಲ್ಲಿರುವ ಐತಿಹಾಸಿಕ ಶಹೀದಿ ಅಸ್ತಾನ್ ಸಿಖ್ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸಲು ಪಾಕಿಸ್ತಾನ ಸಿದ್ದತೆ ನಡೆಸುತ್ತಿದೆ ಎಂಬ ವರದಿ ಹಿನ್ನೆಲೆಯಲ್ಲಿ ಭಾರತ ತನ್ನ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡ ಪ್ರತಿಕ್ರಿಯಿಸಿದ್ದಾರೆ. ವಿದೇಶಾಂಗ ಇಲಾಖೆ ತಕ್ಷಣ ಮಧ್ಯ ಪ್ರವೇಶಿಸಬೇಕು ಎಂದು ಅಮರಿಂದರ್ ಸಿಂಗ್ ಆಗ್ರಹಿಸಿದ್ದಾರೆ. ಲಾಹೋರ್ ನಲ್ಲಿರುವ ಸಿಖ್ ಗುರುದ್ವಾರದ ರಕ್ಷಣೆಯನ್ನು ಖಚಿತಪಡಿಸಬೇಕು ಎಂದು ಅವರು ಮನವಿಮಾಡಿದ್ದಾರೆ