ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಬಗ್ಗೆ ತನಿಖೆ ನಡೆಸಲು ಬಂದಿದ್ದ ಐಪಿಎಸ್ ಅಧಿಕಾರಿ ವಿನಯ ತಿವಾರಿಯನ್ನು ಕ್ವಾರಂಟೈನ್ ನಿಂದ ಮುಕ್ತಗೊಳಿಸಲಾಗಿದೆ. ಇಂದು ಅವರು ಪಾಟ್ನಾಕ್ಕೆ ತೆರಳಲಿದ್ದಾರೆ. ಮುಂಬೈಗೆ ಆಗಮಿಸಿದ ಕೂಡಲೇ ವಿನಯ ತಿವಾರಿಯನ್ನು ಮುಂಬೈನ ಆರೋಗ್ಯ ಅಧಿಕಾರಿಗಳು ಕ್ವಾರಂಟೈನ್ ಗೆ ಗುರಿಪಡಿಸಿದ್ದರು. ಇದಕ್ಕೆ ಬಿಹಾರ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.
ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಕುರಿತ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಬಿಹಾರಕ್ಕೆ ಮರಳಲು ವಿನಯ ತಿವಾರಿಗೆ ಅನುಮತಿ ನೀಡಲಾಗಿದೆ.
ಇದೇ ವೇಳೆ ಆರೋಪ ಎದುರಿಸುತ್ತಿರುವ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿಯನ್ನು ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಲಿದ್ದಾರೆ. ಸುಶಾಂತ್ ಬ್ಯಾಂಕ್ ಖಾತೆಯಿಂದ 15 ಕೋಟಿ ರೂಪಾಯಿಗಳನ್ನು ಇತರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ.