ನವದೆಹಲಿ: ಕೊರೋನಾ ವಿಮಾ ಪಾಲಿಸಿ ಬಿಡುಗಡೆಗೆ ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ ಐಆರ್ ಡಿಎಐ ವಿಮಾ ಸಂಸ್ಥೆಗಳಿಗೆ ಸೂಚಿಸಿದೆ. ಕೊರೋನಾ ಚಿಕಿತ್ಸೆ ವೆಚ್ಚ ಭರಿಸಲು ಜನ ಸಾಮಾನ್ಯರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಐಆರ್ ಡಿಎಐ ಈ ಸೂಚನೆ ನೀಡಿದೆ. ಇದೀಗ ಜಾರಿಯಲ್ಲಿರುವ ಕೆಲವು ಆರೋಗ್ಯ ವಿಮಾ ಯೋಜನೆಗಳು ಕೊರೋನಾದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ದೂರು ಕೂಡ ಕೇಳಿ ಬಂದಿದೆ.
ಕೊರೋನಾ ಕವಚ ಮತ್ತು ಕೊರೋನಾ ರಕ್ಷಕ್ ಎಂಬ ಎರಡು ವಿಮಾ ಯೋಜನೆಗಳನ್ನು ಪರಿಚಯಿಸುವಂತೆ ಐಆರ್ ಡಿ ಎಐ ಸೂಚಿಸಿದೆ. ಕೊರೋನಾ ಕವಚ್ ಯೋಜನೆ ವಿಮಾ ಮೊತ್ತ 50,000 ದಿಂದ 5 ಲಕ್ಷ ರೂಪಾಯಿಗಳಾಗಿವೆ. ಅದೇ ರೀತಿ ಕೊರೋನಾ ರಕ್ಷಕ್ 50,000ದಿಂದ 2. 5 ಲಕ್ಷದ ವರೆಗಿನ ವಿಮಾ ಸೌಲಭ್ಯ ನೀಡಲಿದೆ.
ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, 52 ಲಕ್ಷ ದಾಟಿದೆ. ಹತ್ತು ಲಕ್ಷದಷ್ಟು ಕೊರೋನಾ ಸೋಂಕಿತರು ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.