ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಮನುಷ್ಯರ ರೀತಿಯಲ್ಲಿ ಪ್ರಾಣಿಗಳಿಗೆ ಕೂಡ ಪ್ರವಾಹದಿಂದ ಸಂಕಷ್ಟ ಎದುರಾಗಿದೆ. ಮುಖ್ಯವಾಗಿ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಬ್ರಹ್ಮಪುತ್ರ ಮತ್ತು ಅದರ ಉಪ ನದಿಗಳ ನೀರು ಉದ್ಯಾನದಲ್ಲಿ ಪ್ರಾಣಿಗಳ ಪ್ರಾಣ ಅಪಹರಿಸಿವೆ. ಮೂಕ ಪ್ರಾಣಿಗಳು ರಕ್ಷಣೆಗಾಗಿ ಮೊರೆಯಿಡುತ್ತಿವೆ. ಆದರೆ ಅವುಗಳ ಆರ್ತನಾದ ಯಾರಿಗೂ ಕೇಳಿಸುತ್ತಿಲ್ಲ.
ಪ್ರವಾಹದ ಸೆಳೆತ ಹೆಚ್ಚಾಗಿರುವುದರಿಂದ ಈ ಮೂಕ ಪ್ರಾಣಿಗಳನ್ನು ಅಷ್ಟು ಸುಲಭದಲ್ಲಿ ರಕ್ಷಿಸಲು ಸಾಧ್ಯವಾಗುತ್ತಿಲ್ಲ. ಯಮಸ್ವರೂಪಿ ಪ್ರವಾಹಕ್ಕೆ ಇದುವರೆಗೆ 66 ವಿವಿಧ ಪ್ರಾಣಿಗಳು ಬಲಿಯಾಗಿವೆ. ಇದು ಉದ್ಯಾನವನದ ನಿರ್ದೇಶಕ ಪಿ. ಶಿವಕುಮಾರ್ ಅತೀ ನೋವಿನಿಂದ ಹೇಳಿದ ಮಾತು. ಪ್ರಕೃತಿಯ ರೌದ್ರ ಅವತಾರದ ಮುಂದೆ ನಾವು ಅಸಹಾಯಕರಾಗಿದ್ದೇವೆ. ನಮ್ಮಿಂದಾಗುವ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಕಾಜಿರಂಗದಲ್ಲಿ 170 ಪ್ರಾಣಿಗಳನ್ನು ಪ್ರವಾಹದಿಂದ ರಕ್ಷಿಸಲಾಗಿದೆ. ಉದ್ಯಾನವನದ ಶೇಕಡ 80 ಪ್ರದೇಶ ಇದೀಗ ಪ್ರವಾಹಕ್ಕೆ ತುತ್ತಾಗಿದೆ. ಇದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತಿದೆ. ಖಡ್ಗಮೃಗ ಸೇರಿದಂತೆ ವೈವಿಧ್ಯಮಯ ಪ್ರಾಣಿಗಳಿಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಖ್ಯಾತಿ ಪಡೆದಿದೆ.