ಕೊಚ್ಚಿ: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ತನಿಖಾ ದಳ , ಎನ್ ಐ ಎ ಕೇರಳದ ಉನ್ನತ ಶಿಕ್ಷಣ ಸಚಿವ ಕೆ. ಟಿ. ಜಲೀಲ್ ಅವರನ್ನು ವಿಚಾರಣೆಗೆ ಗುರಿಪಡಿಸಿದೆ. ಇಂದು ಮುಂಜಾನೆ ಆರು ಗಂಟೆಗೆ ಸಚಿವ ಜಲೀಲ್ ಅವರು ಎನ್ ಐ ಎ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಈ ಮೊದಲು ಜಾರಿ ನಿರ್ದೇಶನಾಲಯ ಜಲೀಲ್ ಅವರನ್ನು ವಿಚಾರಣೆಗೆ ಗುರಿಪಡಿಸಿತ್ತು.
ದುಬೈಯಿಂದ ಶಿಷ್ಟಾಚಾರ ಕಾನೂನು ಉಲ್ಲಂಘಿಸಿ ಪಾರ್ಸೆಲ್ ಗಳನ್ನು ಪಡೆದಿದ್ದಾರೆ ಎಂಬ ಗಂಭೀರ ಆರೋಪ ವನ್ನು ಜಲೀಲ್ ಎದುರಿಸುತ್ತಿದ್ದಾರೆ. ಈ ಪಾರ್ಸೆಲ್ ಗಳಲ್ಲಿ ಅಕ್ರಮವಾಗಿ ಚಿನ್ನವನ್ನು ಸಾಗಿಸಲಾಗುತ್ತಿತ್ತು ಎಂಬ ಆರೋಪ ಕೂಡ ಕೇಳಿ ಬಂದಿದೆ.
ಚಿನ್ನ ಕಳ್ಳ ಸಾಗಾಟದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಜತೆ ಜಲೀಲ್ ವ್ಯಾವಹಾರಿಕ ಸಂಬಂಧ ಕೂಡ ಹೊಂದಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ. ಸಚಿವ ಜಲೀಲ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಕೇರಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಹಲವು ಪ್ರದೇಶಗಳಲ್ಲಿ ಪೊಲೀಸರು ರಾಜಕೀಯ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ಕೂಡ ಎಸಗಿದ್ದಾರೆ.