ಗುವಾಹಟಿ: ಅಸ್ಸಾಂನಲ್ಲಿ ಸೃಷ್ಟಿಯಾಗಿರುವ ಜಲ ಪ್ರಳಯಕ್ಕೆ ಖ್ಯಾತ ಕ್ರಿಕೆಟ್ ಆಟಗಾರ ಕೆವಿನ್ ಪೀಟರ್ ಸನ್ ಆತಂಕ ವ್ಯಕ್ತಪಡಿಸಿದ್ದಾರೆ. ಅಸ್ಸಾಂನಲ್ಲಿ ಪ್ರವಾಹದಿಂದ ಸಂಕಷ್ಟಕ್ಕೀಡಾದವರ ಪರಿಸ್ಥಿತಿ ಶೀಘ್ರವೇ ಸುಧಾರಿಸಲಿ ಎಂದು ಪೀಟರ್ ಸನ್ ಹಾರೈಸಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಪೀಟರ್ ಸನ್ ,ಅಸ್ಸಾಂ ಪ್ರವಾಹದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅಸ್ಸಾಂಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಜನರ ಜತೆ ತೆಗೆದ ಪೋಟೋಗಳನ್ನು ಕೂಡ ಪೀಟರ್ ಸನ್ ಶೇರ್ ಮಾಡಿದ್ದಾರೆ.
ಇದೇ ವೇಳೆ ಅಸ್ಸಾಂ ಜಲ ಪ್ರಳಯದಲ್ಲಿ ಮುಳುಗಿಹೋದ ಕಾಜಿರಂಗ ಉದ್ಯಾನದಲ್ಲಿ 108 ಪ್ರಾಣಿಗಳು ಪ್ರಾಣ ಕಳೆದುಕೊಂಡಿವೆ ಎಂದು ಅಂದಾಜಿಸಲಾಗಿದೆ. ಪ್ರವಾಹದಿಂದ ಸುಮಾರು ಐದು ಲಕ್ಷ ಮಂದಿ ತೊಂದರೆಗೆ ಸಿಲುಕಿದ್ದಾರೆ. 521 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಐವತ್ತು ಸಾವಿರ ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.