newsics.com
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ನ 100ನೇ ಆವೃತ್ತಿಗಾಗಿ ವಿಶೇಷ ವಿನ್ಯಾಸದ ಲೊಗೊ ಹಾಗೂ ಜಿಂಗಲ್ಗಳನ್ನು ಆಕಾಶವಾಣಿ ಆಹ್ವಾನಿಸಿದೆ.
100ನೇ ಆವೃತ್ತಿಯು ಏಪ್ರಿಲ್ ತಿಂಗಳ ಕೊನೆಯ ಭಾನುವಾರ (ಏ 30) ನಡೆಯಲಿದೆ. ಮನ್ ಕಿ ಬಾತ್ ಮೂಲಕ ಮೋದಿ ಅವರು ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದು, ಕಾರ್ಯಕ್ರಮವೂ ಸಂಚಿಕೆಯಿಂದ ಸಂಚಿಕೆಗೆ ಹೆಚ್ಚು ಜನಪ್ರಿಯವಾಗುತ್ತಿದೆ.
ಭಾರತ ಸರ್ಕಾರದ mygov.in ಜಾಲತಾಣದಲ್ಲಿ ಲೋಗೊ ಮತ್ತು ಜಿಂಗಲ್ಗೆ ಸಂಬಂಧಿಸಿದ ತಾಂತ್ರಿಕ ವಿವರಗಳನ್ನು ನೀಡಲಾಗಿದೆ. ಲೊಗೊಗಳನ್ನು JPEG/ JPG/ PNG/ SVG ಫಾರ್ಮಾಟ್ಗಳಲ್ಲಿ ಅಪ್ಲೋಡ್ ಮಾಡಬಹುದು. ವರ್ಣಗಳಲ್ಲಿ ವಿನ್ಯಾಸ ಮಾಡಬೇಕು. 5X5 ಸೆಂಮೀಯಿಂದ, 60X60 ಸೆಂಮೀ ಅಳತೆಯಲ್ಲಿ, ಪೋರ್ಟೇಟ್ (ಉದ್ದ) ಅಥವಾ ಲ್ಯಾಂಡ್ಸ್ಕೇಪ್ (ಅಡ್ಡ) ಆಕಾರದಲ್ಲಿ ಲೋಗೊಗಳನ್ನು ವಿನ್ಯಾಸ ಮಾಡಬಹುದಾಗಿದೆ. ಇವು ವೆಬ್ಸೈಟ್, ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುವಂತಿರಬೇಕು. ಪತ್ರಿಕಾ ಹೇಳಿಕೆಗಳು, ಲೇಖನ ಸಾಮಗ್ರಿಗಳು, ಸ್ಮರಣಿಕೆಗಳು ಸೇರಿದಂತೆ ಇತರ ಪ್ರಚಾರ ಸಾಮಗ್ರಿಗಳಲ್ಲಿ ಸುಲಭವಾಗಿ ಬಳಸುವ ರೀತಿಯಲ್ಲಿರಬೇಕು. ಲೊಗೊಗಳು ಕನಿಷ್ಠ 300 ಡಿಪಿಐ ರೆಸಲ್ಯೂಶನ್ ಹೊಂದಿರಬೇಕು ಎಂದು ಭಾರತ ಸರ್ಕಾರವು ವಿವರಗಳನ್ನು ನೀಡಿದೆ.