ತಿರುವನಂತಪುರಂ: ಕಾಸರಗೋಡಿನಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ 43 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರಲ್ಲಿ ವಧು ಮತ್ತು ವರ ಕೂಡ ಸೇರಿದ್ದಾರೆ. ಕಾಸರಗೋಡಿನ ಚೆಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ 4ನೇ ವಾರ್ಡ್ ಗೆ ಒಳಪಟ್ಟ ಪಿಲಾಂಕಟ್ಟೆಯಲ್ಲಿ ಈ ಪ್ರಕರಣ ವರದಿಯಾಗಿದೆ.
ಮದುವೆ ಸಮಾರಂಭದಲ್ಲಿ 60 ಮಂದಿ ಪಾಲ್ಗೊಂಡಿದ್ದರು. ಇವರಲ್ಲಿ ಇದೀಗ 43 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಶುಕ್ರವಾರ ವಧುವಿನ ತಂದೆಯಲ್ಲಿ ಕೂಡ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದಿತ್ತು. ಅವರ ಸಂಪರ್ಕದಿಂದ ಇತರ ಏಳು ಮಂದಿಗೆ ಕೂಡ ಕೊರೋನಾ ತಗುಲಿದೆ.
ಈ ಮಧ್ಯೆ ಕಾಸರಗೋ಼ಡು ಸೇರಿದಂತೆ ಜಿಲ್ಲೆಯ ಐದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅನಗತ್ಯ ಸಂಚಾರ ನಿರ್ಬಂಧಿಸಲಾಗಿದೆ.
ಶನಿವಾರ ಕಾಸರಗೋಡಿನಲ್ಲಿ 105 ಕೊರೋನಾ ಪ್ರಕರಣ ವರದಿಯಾಗಿದೆ. ಕೇರಳದಲ್ಲಿ ಒಟ್ಟು ಇಂದು 1103 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಐದು ಮಂದಿ ಮೃತಪಟ್ಟಿದ್ದಾರೆ.