ತಿರುವನಂತಪುರಂ: ಎಲ್ಲ ಮುನ್ನೆಚ್ಚರಿಕೆ ಕ್ರಮಗಳ ಬಳಿಕವೂ ಕೊರೋನಾ ಹರಡುವಿಕೆ ತಡೆಯುವಲ್ಲಿ ನೀರಿಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣದ ಕೇರಳ ಸರ್ಕಾರ ರಾಜ್ಯದಲ್ಲಿ ಮಾಸ್ಕ್ ಹಾಗೂ ಹೊರ ರಾಜ್ಯದಿಂದ ರಾಜ್ಯಕ್ಕೆ ಬರುವವರ ನೋಂದಣಿ ಕಡ್ಡಾಯಗೊಳಿಸಿ ಸುಗ್ರೀವಾಜ್ಞೆ ಹೊರಡಿಸಿದೆ.
ಕಳೆದ ಒಂದು ವಾರದಿಂದ ಕೇರಳದಲ್ಲಿ ಕೊರೋನಾ ಸೋಂಕು ಉಲ್ಬಣಿಸಿದ್ದು, ರೋಗ ಹರಡುತ್ತಿರುವ ಮೂಲವನ್ನು ಕಂಡುಹಿಡಿಯುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಸುಗ್ರೀವಾಜ್ಞೆಯ ನಿರ್ಧಾರಕ್ಕೆ ಬಂದಿರುವ ಸರ್ಕಾರ ಕಟ್ಟುನಿಟ್ಟಾದ ಆದೇಶ ಹೊರಡಿಸಿದ್ದು, ನಿಯಮ ಮೀರುವವರಿಗೆ ಎರಡು ವರ್ಷ ಜೈಲು ಸಜೆ ವಿಧಿಸಲು ಆದೇಶದಲ್ಲಿ ನಿರ್ಧರಿಸಿದೆ.
ಕೇರಳ ಸರ್ಕಾರದ ಹೊಸ ಆದೇಶದ ಪ್ರಕಾರ ರಾಜ್ಯದ ಪ್ರತಿ ನಾಗರೀಕರು ತಾವು ಕೆಲಸ ಮಾಡುವ ಸ್ಥಳದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಕಡ್ಡಾಯವಾಗಿ ಮೂಗು, ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸಬೇಕು. ಕನಿಷ್ಠ 6 ಅಡಿ ಅಂತರವನ್ನು ಕಾಪಾಡಬೇಕು. ಹೊರರಾಜ್ಯ ಹಾಗೂ ಹೊರದೇಶದಿಂದ ಕೇರಳಕ್ಕೆ ಬರುವವರು ಕೋವಿಡ್-19 ಜಾಗೃತ್ ಇ ವೇದಿಕೆಯಲ್ಲಿ ತಮ್ಮ ವಿವರವನ್ನು ತುಂಬಬೇಕು ಹಾಗೂ ಪ್ರತ್ಯೇಕವಾಸ ಅನುಭವಿಸಬೇಕು.
ಸಂಬಂಧಪಟ್ಟ ಸಂಸ್ಥೆಗಳಿಂದ ಅನುಮತಿ ಪಡೆಯದೇ ಮೆರವಣಿಗೆ, ಪ್ರತಿಭಟನೆ ನಡೆಸುವಂತಿಲ್ಲ. ಇಂಥ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ 10ನ್ನು ಮೀರುವಂತಿಲ್ಲ. ಮದುವೆಗೆ50 ಹಾಗೂ ಅಂತ್ಯಸಂಸ್ಕಾರಕ್ಕೆ 20 ಜನರನ್ನು ಸಿಮೀತಗೊಳಿಸಿ ಕೇರಳ ಸರ್ಕಾರ ನಿಯಮ ರೂಪಿಸಿದೆ.