ಮುಂಬೈ: ಮಹಾನಗರ ಮುಂಬೈನಲ್ಲಿ ಮೆಟ್ರೋ ರೈಲು ಯೋಜನೆ ಮೂರನೇ ಹಂತದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಐಎಎಸ್ ಅಧಿಕಾರಿ ಅಶ್ವಿನಿ ಭಿಡೆ ಅವರನ್ನು ವರ್ಗಾವಣೆ ಮಾಡಲಾಗಿದೆ. ಮುಂಬೈ ಮಹಾನಗರದಲ್ಲಿ ಪ್ರಸಕ್ತ 33 ಕಿಲೋ ಮೀಟರ್ ಉದ್ದದ ಅತ್ಯಂತ ಸಂಕೀರ್ಣವಾಗಿರುವ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಈ ಮಧ್ಯೆಯೇ ವರ್ಗಾವಣೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ ಅವರ ಒತ್ತಡದಿಂದಾಗಿ ಈ ವರ್ಗಾವಣೆ ನಡೆದಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಭಿಡೆ ಕಾರ್ಯ ವೈಖರಿ ವಿರುದ್ಧ ಆದಿತ್ಯ ಠಾಕ್ರೆ ಈ ಹಿಂದೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರತಿಯೊಂದು ಕೆಲಸವನ್ನು ಅತ್ಯಂತ ಅಚ್ಚು ಕಟ್ಟಾಗಿ ಮತ್ತು ಎಲ್ಲ ಮುನ್ನೆಚ್ಚರಿಕೆ ವಹಿಸಿ ಅಶ್ವಿನಿ ಅವರು ಮಾಡುತ್ತಿದ್ದರು. ಸಹಜವಾಗಿಯೇ ಅವರ ವರ್ಗಾವಣೆ ಮೆಟ್ರೋ ಕಾಮಗಾರಿ ವೇಗದ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಲಾಗಿದೆ.