ನವದೆಹಲಿ: ‘ನನ್ನ ಬಹುದಿನಗಳ ಕನಸು ನನಸಾಗುತ್ತಿದೆ. ಜೀವನದ ಕೆಲವು ಕನಸುಗಳು ಈಡೇರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ ಅವು ಮುಖ್ಯವಾದಾಗ ನಾವು ಕಾಯಲೇಬೇಕಾಗಿದೆ. ಆದೇ ರೀತಿ ಅಯೋಧ್ಯೆಗಾಗಿ ನಾನು ಕಾಯುತ್ತಿದ್ದ ದಿನಗಳು ಸಾರ್ಥಕವಾಗಿದೆ ಎಂದೆನಿಸುತ್ತಿದೆ… ನನ್ನ ಹೃದಯಾಂತರಾಳದ ಕನಸೊಂದು ಈಡೇರಿದ ಅನುಭವ ನನ್ನದು…’
ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಕನಸು ಹೊತ್ತು ದೇಗುಲ ಆಂದೋಲನಕ್ಕೆ ಅಡಿಪಾಯ ಹಾಕಿದ್ದ ಮಾಜಿ ಉಪ ಪ್ರಧಾನಿ, ಹಿರಿಯ ರಾಜಕಾರಣಿ ಎಲ್ ಕೆ ಅಡ್ವಾಣಿ ಆಡಿದ ಮಾತುಗಳಿವು. ವಿಡಿಯೋ ಮೂಲಕ ಮಂಗಳವಾರ ಅಯೋಧ್ಯೆಯ ಕುರಿತು ಅಡ್ವಾಣಿ ಮಾತನಾಡಿದ್ದಾರೆ.
ರಾಮನ ಭವ್ಯ ದೇಗುಲದ ನಿರ್ಮಾಣ ಕಾರ್ಯ ಭಾರತೀಯ ಜನತಾ ಪಕ್ಷದ ಕನಸು ಹಾಗೂ ಮಿಷನ್. 1990ರಲ್ಲಿ ನಡೆದ ರಾಮ ಜನ್ಮಭೂಮಿ ಚಳವಳಿಯ ಸಂದರ್ಭದಲ್ಲಿ ಸೋಮನಾಥದಿಂದ ಅಯೋಧ್ಯೆಯವರೆಗಿನ ರಾಮ ರಥಯಾತ್ರೆಯ ಜವಾಬ್ದಾರಿಯನ್ನು ನಾನು ಹೊತ್ತುಕೊಂಡಿದ್ದೆ. ಈ ಕ್ಷಣ ನಾನು ಅದಕ್ಕೆ ವಿನಮ್ರನಾಗಿದ್ದೇನೆ.
2019ರ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ರಾಮ ಮಂದಿರದ ನಿರ್ಮಾಣ ಕಾರ್ಯಗಳು ಶಾಂತಿಯುತ ವಾತಾವರಣದಲ್ಲಿ ಪ್ರಾರಂಭವಾಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯಲ್ಲಿ ಶ್ರೀರಾಮನಿಗೆ ಅಗ್ರಸ್ಥಾನವಿದೆ. ಈ ದೇವಾಲಯವು ಶ್ರೀ ರಾಮ ನ ಎಲ್ಲಾ ಗುಣಗಳನ್ನು ಅಳವಡಿಸಿಕೊಳ್ಳಲು ಭಾರತೀಯರೆಲ್ಲರಿಗೂ ಪ್ರೇರಣೆ ನೀಡುತ್ತದೆ ಎಂದು ಭಾವಿಸುತ್ತೇನೆ ಎಂದು ಅಡ್ವಾಣಿ ಹೇಳಿದ್ದಾರೆ.
ರಾಮಮಂದಿರ ಶಿಲಾನ್ಯಾಸ; ನನ್ನ ಹೃದಯದ ಕನಸು ನನಸು- ಅಡ್ವಾಣಿ
Follow Us