ಲಕ್ನೋ: ಪಾತಕಿ ಅಬು ಸಲೀಂ ಮತ್ತು ಗ್ಯಾಂಗ್ ಸ್ಟರ್ ಖಾನ್ ಮುಬಾರಕ್ ಸಹಚರನನ್ನು ಉತ್ತರಪ್ರದೇಶ ವಿಶೇಷ ಪೊಲೀಸ್ ದಳ ಬಂಧಿಸಿದೆ. ಅಬು ಸಲೀಂ 1993ರ ಮುಂಬೈ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿದ್ದಾನೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಶೇಷ ದಳ ಅಬು ಸಲೀಂ ಸಹಚರ ಗಜೇಂದ್ರ ಸಿಂಗ್ ನನ್ನು ವಶಕ್ಕೆ ಪಡೆದುಕೊಂಡಿದೆ.
ಭೂಗತ ಚಟುವಟಿಕೆಯ ಮೂಲಕ ಸಂಗ್ರಹಿಸಲಾದ ಹಣವನ್ನು ಗಜೇಂದ್ರ ಸಿಂಗ್ ಆಸ್ತಿ ಖರೀದಿಸಲು ಬಳಸುತ್ತಿದ್ದ ಎಂದು ಆರೋಪಿಸಲಾಗಿದೆ. ಜನರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಕೃತ್ಯದಲ್ಲಿ ಗಜೇಂದ್ರ ಸಿಂಗ್ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ
ಉತ್ತರ ಪ್ರದೇಶದಲ್ಲಿ ಸ್ಥಳೀಯ ಯುವಕರನ್ನು ಸಂಘಟಿಸಿ ಭೂಗತ ಚಟುವಟಿಕೆಗಳಿಗೆ ಚಾಲನೆ ನೀಡುವ ಷಡ್ಯಂತ್ರ ಕೂಡ ಗಜೇಂದ್ರ ಸಿಂಗ್ ರೂಪಿಸಿದ್ದ ಎಂದು ಆರೋಪಿಸಲಾಗಿದೆ.
ಬಂಧಿತ ಗಜೇಂದ್ರಸಿಂಗ್ ನನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ. ರಾಜ್ಯದಲ್ಲಿ ಭೂಗತ ಪಾತಕಿಗಳ ಚಟುವಟಿಕೆಯನ್ನು ಮಟ್ಟಹಾಕುವುದಾಗಿ ಉತ್ತರ ಪ್ರದೇಶ ಪೊಲೀಸರು ಎಚ್ಚರಿಕೆ ನೀಡಿದ್ದಾರೆ