newsics.com
ಕರಾಚಿ: ದಾವೂದ್ ಇಬ್ರಾಹಿಂ ಕಸ್ಕರ್ ಅವರನ್ನು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ (ಐಎಸ್‌ಐ) ಯ ಹೆಚ್ಚುವರಿ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ಮುಂಬೈಯಲ್ಲಿ ಸರಣಿ ಬಾಂಬ್ ಸ್ಫೋಟಗಳನ್ನು ನಡೆಸುವ ಮೂಲಕ ನೂರಾರು ಅಮಾಯಕರ ದಾರುಣ ಸಾವಿಗೆ ಕಾರಣನಾದ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಈಗ ಹೊಸ ಅವತಾರದಲ್ಲಿದ್ದಾನೆ.
ಪಾಕ್‌ನ ಬೇಹುಗಾರಿಕೆ ಸಂಸ್ಥೆ ಐಎಸ್‌ಐಗೆ ಈತ ಕಳೆದ ಹಲವು ದಶಕಗಳಿಂದ ಮಾಡಿರುವ ಸೇವೆ ಪರಿಗಣಿಸಿ ಈತನನ್ನು ಐಎಸ್‌ಐನ ಹೆಚ್ಚುವರಿ ಮಹಾ ನಿರ್ದೇಶಕ ಸ್ಥಾನದಲ್ಲಿ ಕೂರಿಸಲಾಗಿದೆಯಂತೆ. ಗುಪ್ತಚರ ಮೂಲಗಳು ಈ ಮಾಹಿತಿ ನೀಡಿವೆ.
80ರ ದಶಕದಲ್ಲಿ ದುಬೈಗೆ ಪರಾರಿಯಾಗಿದ್ದ ದಾವೂದ್‌ನನ್ನು ಪಾಕ್ ಮೂಲದ ಐಎಸ್‌ಐ ಚೆನ್ನಾಗಿ ಪೋಷಿಸಿತ್ತು. ಪ್ರತಿಯಾಗಿ, 1993ರ ಮಾ.12ರಂದು ಮುಂಬೈಯಲ್ಲಿ ಸರಣಿ ಬಾಂಬ್ ಸ್ಫೋಟಗಳನ್ನು ನಡೆಸುವಲ್ಲಿ ಈತ ಐಎಸ್‌ಐಗೆ ತುಂಬು ನೆರವಾಗಿದ್ದ.
ಸರಣಿ ಬಾಂಬ್ ಸ್ಫೋಟ ನಂತರ ದಾವೂದ್ ತನ್ನ ನೆಲೆಯನ್ನು ದುಬೈನಿಂದ ನೇರ ಕರಾಚಿಗೆ ಸ್ಥಳಾಂತರಿಸಿದ್ದು, ಐಎಸ್‌ಐ ಈತನಿಗೆ ತುಂಬು ಭದ್ರತೆ ಒದಗಿಸಿದೆ. ಕರಾಚಿಯಲ್ಲಿದ್ದುಕೊಂಡು, ಜಗತ್ತಿನಾದ್ಯಂತ ಭಯೋತ್ಪಾದಕ ಕೃತ್ಯವೆಸಗುವಲ್ಲಿ ಪಾಕ್ ಮೂಲದ ಭಯೋತ್ಪಾದಕ ಸಂಘಟನೆಗಳಿಗೆ ಮತ್ತಿದರ ಘಟಕ ಸಂಸ್ಥೆಗಳಿಗೆ ದಾವೂದ್ ತುಂಬು ಸಹಕಾರ ನೀಡುತ್ತಿದ್ದಾನೆ.