ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಮಸೂದೆಗಳಿಂದ ರೈತರ ಕಲ್ಯಾಣವಾಗಲಿದೆ. ಅವರ ಜೀವನ ಮಟ್ಟ ಸುಧಾರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇದರಲ್ಲಿ ಸಂಶಯ ಬೇಡ ಎಂದು ಮನವಿ ಮಾಡಿದರು.
ಸುಳ್ಳು ಸುದ್ದಿಗಳನ್ನು ನಂಬಿ ಹಾದಿ ತಪ್ಪಬೇಡಿ ಎಂದು ಅವರು ಅನ್ನದಾತರಿಗೆ ಮನವಿಮಾಡಿದರು. ಕೊರೋನಾದಿಂದ ರೈತರು ಅತೀ ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ಆದರೂ ಈ ಎಲ್ಲ ಸವಾಲುಗಳನ್ನು ಎದುರಿಸಿ ರೈತರು ಸ್ವಾವಲಂಬಿ ಹಾದಿಯತ್ತ ಹೊರಳುತ್ತಿದ್ದಾರೆ ಎಂದು ಪ್ರಧಾನಿ ನುಡಿದರು. ರೈತ ಇಸ್ಮಾಯಿಲ್ ಅವರ ಉದಾಹರಣೆ ನೀಡಿದ ಪ್ರಧಾನಿ, ಕೃಷಿಯನ್ನು ಹೇಗೆ ಲಾಭದಾಯಕವಾಗಿ ಮಾಡಬಹುದು ಎಂಬುದಕ್ಕೆ ಇಸ್ಮಾಯಿಲ್ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಕೊರೋನಾ ಸಂದರ್ಭದಲ್ಲಿ ದೇಶದ ಹಲವೆಡೆ ರೈತರಿಂದ ಉತ್ಪನ್ನಗಳನ್ನು ನೇರವಾಗಿ ಖರೀದಿಸಿ ಮಾರುಕಟ್ಟೆಗೆ ಪೂರೈಸಲಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲಾಗಿದೆ. ನೂತನ ಕೃಷಿ ಮಸೂದೆ ಕೂಡ ಇದೇ ಗುರಿ ಹೊಂದಿದೆ. ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ಪ್ರಧಾನಿ ಹೇಳಿದರು.
ದೇಶಕ ಕಥೆ ಹೇಳುವ ಪರಂಪರೆ ಕುರಿತು ಕೂಡ ಪ್ರಧಾನಿ ವಿಶೇಷವಾಗಿ ಪ್ರಸ್ತಾಪಿಸಿದರು. ಇದು ನಮ್ಮಲ್ಲಿ ಸಂಸ್ಕೃತಿಯ ಕುರಿತು ಅಭಿಮಾನ ಮೂಡಿಸುತ್ತದೆ. ಸಂವೇದನಾ ಶೀಲತೆ ಹೆಚ್ಚಿಸಲು ನೆರವಾಗುತ್ತಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು