ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಕೃಷಿ ಸಂಬಂಧಿತ ಸುಧಾರಣಾ ಕ್ರಮಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ನೂತನ ಕಾನೂನಿಂದ ರೈತರ ಆದಾಯ ಹೆಚ್ಚಾಗಲಿದೆ ಮತ್ತು ಜೀವನ ಮಟ್ಟ ಸುಧಾರಿಸಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ನವಾಮಿ ಗಂಗಾ ಯೋಜನೆಯಡಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಜಾರಿಯನ್ನು ಎನ್ ಡಿ ಎ ಸರ್ಕಾರ ಮಾಡಿದೆ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಅನುಷ್ಟಾನಗೊಳಿಸಲಾಗಿದೆ ಎಂದು ಪ್ರಧಾನಿ ಹಕ್ಕು ಮಂಡಿಸಿದರು.
ಪ್ರತಿಪಕ್ಷಗಳು ರೈತರಿಗೆ ತಪ್ಪು ಮಾಹಿತಿ ನೀಡುತ್ತಿವೆ. ರೈತರು ಪೂಜಿಸುವ ವಸ್ತುಗಳಿಗೆ ಬೆಂಕಿ ಹಚ್ಚಲಾಗುತ್ತಿದೆ ಎಂದು ಪ್ರಧಾನಿ ಟೀಕಿಸಿದರು. ದೆಹಲಿಯಲ್ಲಿ ಸೋಮವಾರ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿ ನಾಶ ಮಾಡಿದ್ದನ್ನು ಪ್ರಸ್ತಾಪಿಸಿ, ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ. ತಮ್ಮ ಆಯ್ಕೆಯ ಸ್ಥಳದಲ್ಲಿ ಇಚ್ಚಿಸಿದವರಿಗೆ ರೈತರು ತಮ್ಮ ಉತ್ಪನ್ನ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಕೇವಲ ಮಧ್ಯವರ್ತಿಗಳಿಗೆ ತೊಂದರೆಯಾಗುತ್ತದೆ ಹೊರತು ರೈತರಿಗಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದರು