ಮನಾಲಿ: ರಸ್ತೆಯೇ ಇಲ್ಲದ್ದರಿಂದ ಮಹಿಳೆಯರೇ ಗರ್ಭಿಣಿಯೊಬ್ಬರನ್ನು 18 ಕಿ.ಮೀ. ಹೊತ್ತು ಸಾಗಿ ಆಸ್ಪತ್ರೆಗೆ ಸೇರಿಸಿದ ಸಾಹಸದ ಸುದ್ದಿಯಿದು.
ಹಿಮಾಚಲ ಪ್ರದೇಶದ ಕುಲ್ಲು ಎಂಬ ಕುಗ್ರಾಮದಲ್ಲಿ ರಸ್ತೆ ಇಲ್ಲದ್ದರಿಂದ ಮಹಿಳೆಯರ ಗುಂಪೊಂದು ಕುರ್ಚಿಯಲ್ಲಿ ಗರ್ಭಿಣಿಯೊಬ್ಬರನ್ನು ಕಾಡುಮೇಡಿನ ಪ್ರದೇಶಗಳಲ್ಲಿ ಹೊತ್ತು ಸಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕುಲ್ಲು ಎಂಬಲ್ಲಿನ ಗಡಪರ್ಲಿ ಪಂಚಾಯತಿಯ ಶಕ್ತಿ ಗ್ರಾಮದ 27 ವರ್ಷದ ಸುನೀತಾ ದೇವಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಗ ಗ್ರಾಮದ ಪುರುಷರೆಲ್ಲ ಕೆಲಸಕ್ಕೆ ಹೋಗಿದ್ದರು. ಮೊಬೈಲ್ ಫೋನ್ ನೆಟ್ವರ್ಕ್ ಹಾಗೂ ಆರೋಗ್ಯ ಸೇವಾ ಸೌಕರ್ಯವೂ ಇಲ್ಲದ್ದರಿಂದ ಅನ್ಯ ಮಾರ್ಗವಿಲ್ಲದೆ ಆಕೆಯನ್ನು ಹೊತ್ತು ಸಾಗಿದರು.
ಬೆಳಗ್ಗೆ 8:40ಕ್ಕೆ ಗ್ರಾಮದಿಂದ ಹೊರಟ ಅವರು ಅಪರಾಹ್ನ 3:30ಕ್ಕೆ ನಿಹರ್ನಿ ಎಂಬಲ್ಲಿಗೆ ತಲುಪಿದರು. ಅಲ್ಲಿಂದ ರಸ್ತೆ ಮಾರ್ಗವಾಗಿ ಆಕೆಯನ್ನು ಸೈಂಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.
ಇಲ್ಲಿ ಭೂಕುಸಿತ, ಹಿಮಪಾತ ಸಾಮಾನ್ಯವಾಗಿದ್ದು, ಕಳೆದ ಜನವರಿ 19ರಂದು ಪೋಲಿಯೋ ಲಸಿಕೆ ಹಾಕಲು ತೆರಳುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಶಕ್ತಿ ಗ್ರಾಮದ ಬಳಿ ಕಣಿವೆಗೆ ಬಿದ್ದು ಸಾವನ್ನಪ್ಪಿದ್ದರು.
ಗರ್ಭಿಣಿಯನ್ನು 18 ಕಿ.ಮೀ. ಹೊತ್ತು ಸಾಗಿದ ಮಹಿಳೆಯರು!
Follow Us