ಕೊಚ್ಚಿ; ಭದ್ರತೆ ಹೆಸರಿನಲ್ಲಿ ಕೊನೆಯ ಕ್ಷಣದಲ್ಲಿ ತಮ್ಮ ವಿವಾಹದ ಸ್ಥಳವನ್ನು ಬದಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ಜೋಡಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೆರವಿನ ಹಸ್ತ ಚಾಚಿದ್ದಾರೆ.
ಅಮೆರಿಕ ನಿವಾಸಿ ಆ್ಯಶ್ಲೇ ಹಾಲ್ ಕೊಚ್ಚಿಯ ಪಂಚತಾರಾ ಹೋಟೆಲ್ ಒಂದರಲ್ಲಿ ವಿವಾಹದ ಸ್ಥಳವನ್ನು ನಿಗದಿಪಡಿಸಿದ್ದರು. ಆದರೆ, ನಾಳೆ ನಡೆಯಬೇಕಿದ್ದ ವಿವಾಹಕ್ಕೆ ಅವರು ನಿನ್ನೆ ಆಗಮಿಸಿದಾಗ, ಹೋಟೆಲ್ ಸಿಬ್ಬಂದಿ ವಿವಾಹದ ಸ್ಥಳ ಬದಲಿಸುವಂತೆ ಸೂಚಿಸಿದ್ದರು. ಕಾರಣ, ಕೊಚ್ಚಿಗೆ ಆಗಮಿಸಲಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅದೇ ಹೋಟೆಲ್ ನಲ್ಲಿ ತಂಗಲಿದ್ದರು. ಭದ್ರತಾ ಮುನ್ನೆಚ್ಚರಿಕೆಯಾಗಿ ವಿವಾಹವನ್ನು ರದ್ದುಪಡಿಸಲಾಗಿತ್ತು.
ಇದರಿಂದ ಬೇಸತ್ತ ಆ್ಯಶ್ಲೇ ಟ್ವಿಟರ್ ನಲ್ಲಿ ರಾಷ್ಟ್ರಪತಿ ಭವನದ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿ ತನ್ನ ದುಃಖ ಹಂಚಿಕೊಂಡಿದ್ದರು. ಈ ವಿಷಯ ತಿಳಿದ ರಾಷ್ಟ್ರಪತಿಗಳು ಮಂಗಳವಾರ ಬೆಳಗ್ಗೆಯೇ ಕೊಚ್ಚಿಯಿಂದ ಹೊರಡುವಂತೆ ತಮ್ಮ ಕಾರ್ಯಕ್ರಮಗಳನ್ನು ಬದಲಿಸಿಕೊಂಡಿದ್ದಾರೆ. ಜೊತೆಗೆ, ಟ್ವಿಟರ್ ಮೂಲಕ ನವಜೋಡಿಗೆ ಶುಭಾಷಯವನ್ನೂ ಕೋರಿದ್ದಾರೆ.