ನವದೆಹಲಿ: ಬುಧವಾರ ಭಾರತಕ್ಕೆ ಆಗಮಿಸಿದ 5 ರಫೇಲ್ ಯುದ್ಧ ವಿಮಾನಗಳನ್ನು ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಂಸ್ಕೃತದಲ್ಲಿ ಟ್ವೀಟ್ ಮಾಡಿ ರಾಷ್ಟ್ರೀಯ ಭದ್ರತೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.ರಾಷ್ಟ್ರವನ್ನು ಭದ್ರಪಡಿಸುವುದಕ್ಕಿಂತ ದೊಡ್ಡ ಪುಣ್ಯವಿಲ್ಲ; ರಾಷ್ಟ್ರವನ್ನು ಭದ್ರಪಡಿಸುವುದಕ್ಕಿಂತ ದೊಡ್ಡ ಉಪವಾಸವಿಲ್ಲ; ರಾಷ್ಟ್ರವನ್ನು ಭದ್ರಪಡಿಸುವುದಕ್ಕಿಂತ ದೊಡ್ಡ ಕೆಲಸ ಇನ್ನೊಂದಿಲ್ಲ ಎಂದು ಸಂಸ್ಕೃತದಲ್ಲಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಅಂಬಾಲ ವಾಯು ನೆಲೆಯಲ್ಲಿ ರಫೇಲ್ ಯುದ್ಧ ವಿಮಾನಗಳು ಬಂದಿಳಿಯುತ್ತಿರುವ ವಿಡಿಯೋವನ್ನು ಸಹ ಪ್ರಧಾನಿ ಮೋದಿ ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಫ್ರಾನ್ಸ್ ನಲ್ಲಿ ನಿರ್ಮಾಣಗೊಂಡ ಬಹು ಪಾತ್ರ ನಿರ್ವಹಿಸುವ ರಫೇಲ್ ಯುದ್ಧ ವಿಮಾನಗಳು ಅಂಬಾಲ ವಾಯು ನೆಲೆಗೆ ಬಂದಿಳಿದಾಗ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭೌದೂರಿಯಾ ಸ್ವಾಗತಿಸಿದರು.
ಫ್ರೆಂಚ್ ಬಂದರು ನಗರವಾದ ಬೋರ್ಡೆಕ್ಸ್ ನ ಮೆರಿಗ್ನಾಕ್ ವಾಯುನೆಲೆದಿಂದ 7,000 ಕಿ.ಮೀ ದೂರ ಕ್ರಮಿಸಿದ ನಂತರ ವಿಮಾನಗಳು ಅಂಬಾಲಾ ವಾಯುಪಡೆಯ ನೆಲೆಗೆ ಬಂದಿಳಿದವು. ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯು ಪ್ರದೇಶ ಪ್ರವೇಶಿಸಿದ ತಕ್ಷಣ ಎರಡು ಸುಖೋಯ್ ಎಂಕೆಐ ವಿಮಾನಗಳು ಬೆಂಗಾವಲು ಕಲ್ಪಿಸಿದವು.
ಲೋಹ ಹಕ್ಕಿಗಳು ಅಂಬಾಲಾದಲ್ಲಿ ಸುರಕ್ಷಿತವಾಗಿ ಇಳಿದಿವೆ. ಭಾರತದಲ್ಲಿ ರಫೆಲ್ ಯುದ್ಧ ವಿಮಾನಗಳ ಪಾದಾರ್ಪಣೆಯು ದೇಶದ ಸೇನಾ ಇತಿಹಾಸದಲ್ಲಿ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ಬಹುಪಾತ್ರದ ಈ ವಿಮಾನಗಳು ಭಾರತೀಯ ವಾಯುಪಡೆ ಸಾಮರ್ಥ್ಯಗಳಲ್ಲಿ ಕ್ರಾಂತಿಯನ್ನುಂಟುಮಾಡಲಿವೆ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ರಫೇಲ್ ಯುದ್ಧ ವಿಮಾನಗಳಿಗೆ ಸಂಸ್ಕೃತದ ಟ್ವೀಟ್ ಮೂಲಕ ಪ್ರಧಾನಿ ಸ್ವಾಗತ
Follow Us