ನವದೆಹಲಿ: 2019, ಫೆಬ್ರವರಿ 14. ಸಮಯ ಮಧ್ಯಾಹ್ನ 3.30. ಜಮ್ಮುವಿನಿಂದ ಶ್ರೀನಗರಕ್ಕೆ ಕೇಂದ್ರ ಮೀಸಲು ಪೊಲೀಸ್ ಪಡೆಯ 78 ವಾಹನಗಳು ಒಂದರ ಹಿಂದೆ ಒಂದು ಚಲಿಸುತ್ತಿದ್ದವು. ವಾಹನಗಳು ಪುಲ್ವಾಮಾ ಬಳಿ ಬಂದಾಗ ಇದಕ್ಕಿದ ಹಾಗೆ ಭಾರೀ ಸ್ಪೋಟದ ಸದ್ದು ಕೇಳಿಸಿತು. ಕ್ಷಣಮಾತ್ರದಲ್ಲಿ ಸ್ಫೋಟದ ತೀವ್ರತೆಗೆ 40 ಸಿಆರ್ ಪಿ ಎಫ್ ಯೋಧರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಪಾಕಿಸ್ತಾನದ ಜೈಶ್ ಉಗ್ರ ಸಂಘಟನೆ ಈ ಕೃತ್ಯದ ಹೊಣೆ ಹೊತ್ತುಕೊಂಡಿತ್ತು. ಇದು ದೇಶದೆಲ್ಲೆಡೆ ಆಕ್ರೋಶದ ಕಿಡಿಯನ್ನು ಹೊತ್ತಿಸಿತು. ಸರಿಯಾಗಿ 12 ದಿನಗಳ ಬಳಿಕ ಪಾಕ್ ಕೃತ್ಯಕ್ಕೆ ಭಾರತ ಸೂಕ್ತ ತಿರುಗೇಟು ನೀಡಿತು. ಬಾಲಾಕೋಟ್ ನಲ್ಲಿರುವ ಉಗ್ರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿ 200ಕ್ಕೂ ಹೆಚ್ಚು ಉಗ್ರರ ಸಂಹಾರ ನಡೆಸಲಾಯಿತು. ಇದರ ಬೆನ್ನಲ್ಲೇ ಭಾರತದ ಮೇಲೆ ವೈಮಾನಿಕ ದಾಳಿ ನಡೆಸಲು ಬಂದ ಪಾಕಿಸ್ತಾನದ ಎಫ್ -16 ಯುದ್ದ ವಿಮಾನವನ್ನು ಹೊಡೆದುರುಳಿಸಲಾಯಿತು. ಭಾರತದ ಹೆಮ್ಮೆಯ ಅಭಿನಂದನ್ ತಮ್ಮ ಸಾಹಸಕ್ಕಾಗಿ ದೇಶಾದ್ಯಂತ ಮನೆ ಮಾತಾದರು. ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ಅಭಿನಂದನ್ ಅವರನ್ನು ಗೌರವದಿಂದ ಭಾರತಕ್ಕೆ ಹಸ್ತಾಂತರಿಸಿತು. ಇಂದು ಈ ಎಲ್ಲ ಹುತಾತ್ಮ ಯೋಧರನ್ನು ಸ್ಮರಿಸುವ ದಿನ. ಅವರ ಬಲಿದಾನಕ್ಕೆ ದೇಶ ಗೌರವದ ನಮನ ಸಲ್ಲಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯೋಧರ ಸಾಹಸ ಕಥೆಗಳು ಸದ್ದು ಮಾಡುತ್ತಿವೆ.