ನವದೆಹಲಿ: ಸಚಿನ್ ಪೈಲಟ್ ಮತ್ತು ಇತರ 18 ಬಂಡಾಯ ಶಾಸಕರು ತಮ್ಮ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ರಾಜಸ್ತಾನ ಹೈಕೋರ್ಟ್ ಆದೇಶ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಈ ಆದೇಶವು ತನ್ನ ತೀರ್ಪಿಗೆ ಬದ್ಧವಾಗಿರುತ್ತದೆ ಎಂದೂ ಸ್ಪಷ್ಟಪಡಿಸಿದೆ.
ನಾಳೆ ಹೈಕೋರ್ಟ್ ನ ತೀರ್ಪು ಹೊರಬರಲಿ, ಅದರ ತೀರ್ಪಿನ ಮೇಲೆ ಸರ್ವೋಚ್ಛ ನ್ಯಾಯಾಲಯದ ತೀರ್ಪು ನಿರ್ಧಾರವಾಗುತ್ತದೆ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ ಆರ್ ಗವೈ ಮತ್ತು ಕೃಷ್ಣ ಮುರಳಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಶಾಸಕರ ಅನರ್ಹತೆ ಪ್ರಕರಣದಲ್ಲಿ ರಾಜಸ್ತಾನ ಹೈಕೋರ್ಟ್ ವಿಚಾರಣೆಯಲ್ಲಿ ಮಧ್ಯ ಪ್ರವೇಶಿಸಲು ನಿರಾಕರಿಸಿದೆ.
ಕೊರೋನಾ ಚಿಕಿತ್ಸಾ ಉಪಕರಣ ಖರೀದಿಯಲ್ಲಿ 2000 ಕೋಟಿ ರೂ. ಅವ್ಯವಹಾರ ಆರೋಪ
‘ಆದೇಶ ನೀಡದಂತೆ ನಾವು ಹೈಕೋರ್ಟಿಗೆ ನಿರ್ಬಂಧ ಹೇರುತ್ತಿಲ್ಲ. ಆದರೆ, ಆ ಆದೇಶವು, ಸ್ಪೀಕರ್ ಅವರು ನಮಗೆ ಸಲ್ಲಿಸಿರುವ ಅರ್ಜಿ ಕುರಿತ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ’ ಎಂದು ಹೇಳಿದ ಪೀಠವು, ವಿಚಾರಣೆಯನ್ನು ಜುಲೈ 27ಕ್ಕೆ ನಿಗದಿಪಡಿಸಿತು.
ಅನರ್ಹತೆ ನೋಟಿಸ್ ಪ್ರಶ್ನಿಸಿ 19 ಶಾಸಕರು ಸಲ್ಲಿಸಿದ ಅರ್ಜಿಗೆ ಸಂಬಂಧಿತ ಆದೇಶವನ್ನು ಇದೇ 24ರಂದು ಪ್ರಕಟಿಸಲಾಗುವುದು ಎಂದು ರಾಜಸ್ಥಾನ ಹೈಕೋರ್ಟ್ ಹೇಳಿದೆ.