ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಚಿನ್ನದ ಮೇಲಿನ ಸಾಲದ ಪ್ರಮಾಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚಿಸಿದೆ. ಇದುವರೆಗೆ ಕೃಷಿಯೇತರ ಚಟುವಟಿಕೆಗಳಿಗಾಗಿ ಚಿನ್ನದ ಮೌಲ್ಯದ ಶೇಕಡ 75ನ್ನು ಸಾಲವಾಗಿ ನೀಡಲಾಗುತ್ತಿತ್ತು. ಇದೀಗ ಅದನ್ನು ಶೇಕಡ 90ಕ್ಕೆ ಹೆಚ್ಚಿಸಲಾಗಿದೆ.
ಕೊರೋನಾ ಮಹಾಮಾರಿಯಿಂದಾಗಿ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆರ್ ಬಿ ಐ ಹೇಳಿದೆ. ಇದು ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಲು ನೆರವಾಗಲಿದೆ ಎಂದು ಆರ್ ಬಿ ಐ ಅಭಿಪ್ರಾಯಪಟ್ಟಿದೆ.
ಮಾರ್ಚ್ 31ರ ತನಕ ಹೊಸ ನಿಯಮ ಜಾರಿಯಲ್ಲಿರಲಿದೆ. ಲಾಕ್ ಡೌನ್ ಅವಧಿಯಲ್ಲಿ ಚಿನ್ನ ಗಿರವಿ ಇಟ್ಟು ಸಾಲ ಪಡೆಯುವವರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಇದೇ ವೇಳೆ ಬ್ಯಾಂಕ್ ಬಡ್ಡಿದರ ದಲ್ಲಿ ರಿಸರ್ವ್ ಬ್ಯಾಂಕ್ ಯಾವುದೇ ಬದಲಾವಣೆ ಮಾಡಿಲ್ಲ.