ಲಕ್ನೋ: ಪಾತಕಿ ವಿಕಾಸ್ ದುಬೆಯ ನಿಕಟವರ್ತಿ ಅಮರ್ ದುಬೆ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಹತನಾಗಿದ್ದಾನೆ. ಇಂದು ಮುಂಜಾನೆ ಹಿಮಾಚಲ ಪ್ರದೇಶದ ಹಮೀರ್ ಪುರ್ ನಲ್ಲಿ ವಿಶೇಷ ಕಾರ್ಯಾಚರಣೆ ತಂಡ, ಈ ಎನ್ ಕೌಂಟರ್ ನಡೆಸಿದೆ. ಕಾನ್ಪುರದಲ್ಲಿ ವಿಕಾಸ್ ದುಬೆ ಪೊಲೀಸರ ಮೇಲೆ ದಾಳಿ ನಡೆಸಿದಾಗ ಅಮರ್ ದುಬೆ ಕೂಡ ಅಲ್ಲಿದ್ದ ಎಂದು ವರದಿಯಾಗಿತ್ತು.
ಈ ಮಧ್ಯೆ ಪ್ರಮುಖ ಆರೋಪಿ ವಿಕಾಸ್ ದುಬೆಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.ವಿಕಾಸ್ ದುಬೆ ನೇಪಾಳಕ್ಕೆ ಪರಾರಿಯಾಗಿರುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ವಿಕಾಸ್ ದುಬೆ ಹೊಂದಿರುವ ಸಂಪರ್ಕ ತನಿಖೆಗೆ ಹಿನ್ನಡೆಯಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ
ಈ ಹಿನ್ನೆಲೆಯಲ್ಲಿ ವಿಕಾಸ್ ದುಬೆಗೆ ಮಾಹಿತಿ ನೀಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ರೌಡಿ ಶೀಟರ್ ವಿಕಾಸ್ ದುಬೆ ಬಂಧನಕ್ಕೆ ತೆರಳಿದ್ದ ಪೊಲೀಸ್ ತಂಡದ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿ ಸೇರಿದಂತೆ ಎಂಟು ಮಂದಿ ಗುಂಡಿನ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು.
ಬಳಿಕ ಕಾನ್ಪುರದಲ್ಲಿರುವ ವಿಕಾಸ್ ದುಬೆ ಮನೆಯನ್ನು ನೆಲಸಮಗೊಳಿಸಲಾಗಿತ್ತು. ಮನೆಯಲ್ಲಿ ಅಡಗಿಸಿಟ್ಟಿದ್ದ ಸ್ಫೋಟಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.