ಜೈಪುರ: ರಾಜಸ್ತಾನದಲ್ಲಿ ಕಾಂಗ್ರೆಸ್ ಬಿಕ್ಕಟ್ಟು ನಿರ್ಣಾಯಕ ಹಂತ ತಲುಪಿದೆ. ಬಂಡಾಯದ ಕಹಳೆ ಮೊಳಗಿಸಿರುವ ಸಚಿನ್ ಪೈಲಟ್ ಅವರನ್ನು ಉಪ ಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ. ಅಶೋಕ್ ಗೆಹ್ಲೋಟ್ ಸಚಿವ ಸಂಪುಟದಲ್ಲಿದ್ದ ಇಬ್ಬರು ಪೈಲಟ್ ಬೆಂಬಲಿಗರನ್ನು ಕೂಡ ಕೈ ಬಿಡಲಾಗಿದೆ.
ಜೈಪುರದಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಸಚಿನ್ ಪೈಲಟ್ ಗೈರು ಹಾಜರಾಗಿದ್ದರು. ತಮ್ಮ ಬೆಂಬಲಿಗ ಶಾಸಕರೊಂದಿಗೆ ಸಚಿನ್ ಪೈಲಟ್ ನವದೆಹಲಿ ತಲುಪಿದ್ದಾರೆ.
ಪ್ರಬಲ ಗುಜ್ಜರ್ ಜನಾಂಗದ ಬೆಂಬಲ ಹೊಂದಿರುವ ಸಚಿನ್ ಪೈಲಟ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ತಾನ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಮುಖ್ಯಮಂತ್ರಿ ಗೆಹ್ಲೋಟ್ ಅವರನ್ನು ಬದಲಾಯಿಸಬೇಕು ಎಂಬುದೇ ಸಚಿನ್ ಪೈಲಟ್ ಅವರ ಪ್ರಮುಖ ಬೇಡಿಕೆಯಾಗಿದೆ