ಮುಂಬೈ: ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿರುವ ಮಹಾರಾಷ್ಟ್ರ ಸಚಿವ ಅಬ್ದುಲ್ ಸತ್ತಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಮೂಲಕ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರಕ್ಕೆ ಅಬ್ದುಲ್ ಸತ್ತಾರ್ ಮೊದಲ ಆಘಾತ ನೀಡಿದ್ದಾರೆ.
ಅಬ್ದುಲ್ ಸತ್ತಾರ್, ಡಿಸೆಂಬರ್ 30ರಂದು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸಚಿವ ಸಂಪುಟ ಸೇರಿದ ನಾಲ್ವರು ಮುಸ್ಲಿಮರ ಪೈಕಿ ಇವರೂ ಒಬ್ಬರು. ಸತ್ತಾರ್ ಹೊರತುಪಡಿಸಿ ಉಳಿದವರು ಕ್ಯಾಬಿನೆಟ್ ದರ್ಜೆಯ ಸಚಿವರು.
ಮೂಲತಃ ಸತ್ತಾರ್ ಕಾಂಗ್ರೆಸ್ ನವರಾಗಿದ್ದು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಶಿವಸೇನೆ ಸೇರಿದ್ದರು.