newsics.com
ಎಸ್.ಪಿ.ಬಾಲಸುಬ್ರಹ್ಮಣ್ಯಂ ಎಂಜಿನಿಯರಿಂಗ್ ಡ್ರಾಪೌಟ್ ಎಂದರೆ ಯಾರೂ ನಂಬಲಿಕ್ಕಿಲ್ಲ. ಅನಂತಪುರದ ಜೆಎನ್ ಟಿಯು ಸಂಸ್ಥೆಗೆ ಎಂಜಿನಿಯರ್ ಶಿಕ್ಷಣಕ್ಕಾಗಿ ಅಡ್ಮಿಷನ್ ಮಾಡಿಸಿದ್ದರು. ಕೆಲವು ಕಾರಣಗಳಿಗಾಗಿ ಅಧ್ಯಯನವನ್ನು ನಿಲ್ಲಿಸಿದರು. ಬಳಿಕ, ಚೆನ್ನೈನಲ್ಲಿರುವ ಅಸೋಸಿಯೇಟ್ ಮೆಂಟ್ ಆಫ್ ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಗೆ ಸೇರಿಕೊಂಡರು. ಅಲ್ಲಿ ಹಾಡುವ ಸ್ಪರ್ಧೆಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದರು. ಒಮ್ಮೆ, ಎಸ್.ಪಿ. ಕೋದಂಡಪಾಣಿ ಹಾಗೂ ಘಂಟಸಾಲ ತೀರ್ಪುಗಾರರಾಗಿದ್ದ ಸ್ಪರ್ಧೆಯಲ್ಲಿ ಹಾಡಿದರು. ಎಸ್.ಪಿ.ಬಿ. ಕಂಠವನ್ನು ಮೆಚ್ಚಿಕೊಂಡ ಅವರಿಬ್ಬರೂ ಎಸ್.ಪಿ.ಬಿ ಅವರನ್ನು ಚಿತ್ರರಂಗಕ್ಕೆ ಕರೆತರುವ ಮನಸ್ಸು ಮಾಡಿದರು. ಶಿಕ್ಷಣದಲ್ಲಿ ಅವರಿಗೆ ಆಸಕ್ತಿಯೇನೋ ಇತ್ತು, ಆದರೆ, ಹುಟ್ಟಿದ್ದೇ ಹಾಡಲಿಕ್ಕಾಗಿ ಎಂಬಂತೆ ಅವರ ಬದುಕಿನ ದಿಸೆಯೇ ಬದಲಾಯಿತು. ಮುಂದಿನ ದಿನಗಳಲ್ಲಿ ಕೋದಂಡಪಾಣಿ ಅವರ ಚಿತ್ರರಂಗದ ಗುರುವಾದರು.
ಕೋದಂಡಪಾಣಿ ಅವರ ಮಾರ್ಗದರ್ಶನದಂತೆ 1966ರಲ್ಲಿ “ಶ್ರೀ ಮರ್ಯಾದಾ ರಾಮಣ್ಣ’ ಎನ್ನುವ ಚಿತ್ರದಲ್ಲಿ ಎಸ್.ಪಿ.ಬಿ. ಮೊದಲ ಬಾರಿ ಹಾಡಿದರು. ಬಳಿಕ, ಕೆಲವೇ ಸಮಯದಲ್ಲಿ ಕನ್ನಡದಲ್ಲೂ ಅವಕಾಶ ಬಂತು. ಕನ್ನಡದಲ್ಲಿ ಅವರು ಹಾಡಿದ ಮೊದಲ ಚಿತ್ರ “ನಕ್ಕರೆ ಅದೇ ಸ್ವರ್ಗ’.
ತಮಿಳಿನ “ಆದಿಮೈ ಪೆನ್’ ಎನ್ನುವ ಚಿತ್ರಕ್ಕೆ ಎಸ್.ಪಿ.ಬಿ. ಅವರೇ ಹಾಡಬೇಕೆಂದು ಎಂಜಿಆರ್ ಬಯಸಿದ್ದರು. ಎಂಜಿಆರ್ ಹಾಗೂ ಜಯಲಲಿತಾ ಅಭಿನಯದ ಆ ಚಿತ್ರದ “ಆಯಿರಾಮ್ ನಿಲವೇ ವಾ’ ಎನ್ನುವ ಹಾಡನ್ನು ಎಂಜಿಆರ್ ವೈಯಕ್ತಿಕ ಆಸಕ್ತಿ ವಹಿಸಿ ಎಸ್.ಪಿ.ಬಿ. ಅವರಿಂದ ಹಾಡಿಸಿದರು. ಬಳಿಕ, ಈ ಹಾಡು ಸೂಪರ್ ಹಿಟ್ ಆಯಿತು, ಅಷ್ಟೇ ಅಲ್ಲ, ಎಸ್.ಪಿ.ಬಿ. ಅವರಿಗೆ ಅವಕಾಶಗಳ ಬಾಗಿಲನ್ನೇ ತೆರೆಯಿತು. ಈ ಸಮಯದ ಹೊತ್ತಿಗೆ ಎಸ್.ಪಿ.ಬಿ.ಅವರ ಜನಪ್ರಿಯತೆಯ ಅಲೆ ಹೇಗಿತ್ತೆಂದರೆ, ಟಿ.ಎಂ.ಸುಂದರರಾಜನ್ ಹಾಗೂ ಪಿ.ಬಿ.ಶ್ರೀನಿವಾಸ್ ಸ್ಥಾನಕ್ಕೆ ಅವರೇ ಆಯ್ಕೆಯಾಗಲು ಆರಂಭಿಸಿದ್ದರು. ಈ ಯಶಸ್ಸು ನಿರಂತರವಾಗಿ 50 ವರ್ಷಗಳ ಕಾಲ ಮುಂದುವರಿದುದು ಈಗ ಇತಿಹಾಸ.
ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ತುಳು, ಕೊಂಕಣಿ, ಒರಿಯಾ, ಬೆಂಗಾಲಿ, ಮರಾಠಿ, ಪಂಜಾಬಿ ಸೇರಿದಂತೆ ಹದಿನೇಳು ಭಾಷೆಗಳಲ್ಲಿ ಎಸ್.ಪಿ.ಬಿ. ಹಾಡಿದ್ದಾರೆ.
ಚಿತ್ರರಂಗ ಕಂಡ ಖ್ಯಾತ ನಿರ್ದೇಶಕ ಬಾಲಚಂದರ್ ಅವರು ತೆಲುಗು ಚಿತ್ರದ ಹಿಂದಿ ಅವತರಣಿಕೆ “ಏಕ್ ದೂಜೆ ಕೇಲಿಯೇ’ ಚಿತ್ರದ ಎಲ್ಲ ಹಾಡುಗಳನ್ನೂ ಎಸ್.ಪಿ.ಬಿ ಅವರಿಂದ ಹಾಡಿಸಲು ಇಚ್ಛಿಸಿದ್ದರು. ಅದರಂತೆ ಆ ಚಿತ್ರದ ಎಲ್ಲ ಪುರುಷ ದನಿಯ ಹಾಡುಗಳನ್ನು ಎಸ್.ಪಿ.ಬಿ. ಅವರೇ ಹಾಡಿದ್ದಾರೆ. ಈ ಚಿತ್ರಕ್ಕೆ ಅವರು ರಾಷ್ಟ್ರೀಯ ಪುರಸ್ಕಾರವನ್ನೂ ಪಡೆದಿದ್ದಾರೆ.
ಹಿಂದಿನ ಎವರ್ ಗ್ರೀನ್ ಸೂಪರ್ ಹಿಟ್ ಹಾಡುಗಳನ್ನು ಹೊಂದಿರುವ ಚಿತ್ರಗಳೆಂದರೆ, “ಮೈನೇ ಪ್ಯಾರ್ ಕಿಯಾ’ ಹಾಗೂ “ಹಮ್ ಆಪ್ಕೇ ಹೈಂ ಕೌನ್’. ಇವುಗಳ ಹಾಡುಗಳು ಎಸ್.ಪಿ.ಬಿ. ಕಂಠದಲ್ಲೇ ಇವೆ. ಇತ್ತೀಚಿನ “ಚೆನ್ನೈ ಎಕ್ಸ್ ಪ್ರೆಸ್’ ವರೆಗೂ ಎಸ್.ಪಿ.ಬಿ ಅವರ ಬಾಲಿವುಡ್ ಪಯಣ ಮುಂದುವರಿದಿತ್ತು. ಜಿ.ಕೆ.ವೆಂಕಟೇಶ್, ರಾಜನ್ ನಾಗೇಂದ್ರ, ದೇವಾ, ವಿದ್ಯಾಸಾಗರ, ಹಂಸಲೇಖ ಸೇರಿದಂತೆ ಎಲ್ಲ ಪ್ರಮುಖ ಸಂಗೀತ ನಿರ್ದೇಶಕರ ಫೇವರಿಟ್ ಗಾಯಕ ಆಗಿದ್ದರು ಎಸ್.ಪಿ.ಬಿ.
SPB ಎಂಜಿನಿಯರಿಂಗ್ ಡ್ರಾಪೌಟ್!
Follow Us