ಮುಂಬೈ: ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಐಪಿಎಲ್ ಕ್ರೀಡಾಕೂಟ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಈ ಬಾರಿ ಯು ಎ ಇ , ಸಂಯುಕ್ತ ಅರಬ್ ಎಮಿರೇಟ್ಸ್ ನಲ್ಲಿ ಪಂದ್ಯ ನಡೆಯಲಿದೆ.
ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಈ ಮಾಹಿತಿ ನೀಡಿದ್ದಾರೆ. ಎಲ್ಲ ಫ್ರಾಂಚೈಸಿಗಳಿಗೆ ಈ ಸಂಬಂಧ ತಿಳಿಸಲಾಗಿದ್ದು , ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನವೆಂಬರ್ 8ರಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ. ಯುಎಇಯಲ್ಲಿ ಸುಡು ಬಿಸಿಲು ಆಟಗಾರರಿಗೆ ಸವಾಲು ಒಡ್ಡಲಿದೆ. ಕೊರೋನಾದಿಂದ ಐಪಿಎಲ್ ರದ್ದುಮಾಡಿದರೆ 4000 ಕೋಟಿ ರೂಪಾಯಿ ನಷ್ಟ ಸಂಭವಿಸಲಿದೆ ಎಂದು ಬಿಸಿಸಿಐ ಅಂದಾಜಿಸಿತ್ತು.