newsics.com
ನವದೆಹಲಿ: ಕ್ರಿಕೆಟ್ ಬ್ಯಾಟ್-ಬೌಲ್ನಷ್ಟೇ ವೇಗವಾಗಿ ಸದ್ದು ಮಾಡೋದು ವಿವಾದ. ಇದೀಗ ಅಂತಹುದೇ ವಿವಾದವೊಂದಕ್ಕೆ ಐಪಿಎಲ್ ಪಂದ್ಯಾವಳಿ ವೇದಿಕೆ ಒದಗಿಸಿದ್ದು, ಕ್ರಿಕೆಟರ್ ಕೊಹ್ಲಿ ವಿರುದ್ಧ ಧ್ವಂದ್ವಾರ್ಥದಲ್ಲಿ ಕಮೆಂಟ್ ಮಾಡಿದ ಕಾರಣಕ್ಕೆ ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ ವಿವಾದದ ಕೇಂದ್ರಬಿಂದುವಾಗಿದ್ದಾರೆ.
ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ರಾಯಲ್ ಚಾಲೆಂಜರ್ಸ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದ ವೇಳೆ ಕಾಮೆಂಟರಿ ನೀಡುತ್ತಿದ್ದ ಸುನಿಲ್ ಗವಾಸ್ಕರ್ ನೀಡಿದ ಹೇಳಿಕೆ ಇದೀಗ ವಿವಾದವನ್ನು ಹುಟ್ಟುಹಾಕಿದ್ದು, ಕಾಮೆಂಟರಿಯಿಂದ ಸುನಿಲ್ ಗವಾಸ್ಕರ್ ಕೈಬಿಡಬೇಕೆಂಬ ಆಕ್ರೋಶ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದಿದೆ.
ಕಿಂಗ್ಸ್ ಇಲೆವೆನ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಎರಡು ಕ್ಯಾಚ್ ಬಿಟ್ಟಿದ್ದರು. ನಾಯಕ ಕೆ.ಎಲ್.ರಾಹುಲ್ ಕ್ಯಾಚ್ ಎರಡು ಬಾರಿ ಬಿಟ್ಟಿದ್ದರು. ಇದರಿಂದ ಜೀವದಾನ ಪಡೆದ ಕೆ.ಎಲ್.ರಾಹುಲ್, ಸ್ಪೋಟಕ್ ಬ್ಯಾಟಿಂಗ್ ನಲ್ಲಿ 132 ರನ್ ಗಳಿಸಿದ್ದರು. ಇದರಿಂದ ರಾಯಲ್ ಚಾಲೆಂಜರ್ಸ ಸೋಲಿನ ಹಾದಿ ಹಿಡಿದಿತ್ತು. ಈ ತಪ್ಪುಗಳ ಕಾರಣಕ್ಕೆ ಕೊಹ್ಲಿಯನ್ನು ಟೀಕಿಸುವ ಭರದಲ್ಲಿ ಸುನಿಲ್ ಗವಾಸ್ಕರ್, ಇನ್ಹೋನೆ ಲಾಕ್ ಡೌನ್ ಮೇ ಬಸ್ ಅನುಷ್ಕಾ ಕೀ ಗೆಂದೋಕಿ ಹೀ ಪ್ರ್ಯಾಕ್ಟಿಸ್ ಕೀ ಹೇ ಎಂದಿದ್ದರು. (ಇವರು ಲಾಕ್ ಡೌನ್ನಲ್ಲಿ ಕೇವಲ ಅನುಷ್ಕಾ ಬಾಲ್ಗಳ ವಿರುದ್ಧ ಮಾತ್ರ ಅಭ್ಯಾಸ ಮಾಡಿದ್ದಾರೆ)
ಸುನಿಲ್ ಗವಾಸ್ಕರ್ ಈ ದ್ವಂದ್ವಾರ್ಥದ ಹೇಳಿಕೆ ಇದೀಗ ಕೊಹ್ಲಿ ಮತ್ತು ಅನುಷ್ಕಾ ಅಭಿಮಾನಿಗಳನ್ನು ಕೆರಳಿಸಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಕೀಳುಅಭಿರುಚಿಯ ಹೇಳಿಕೆ ನೀಡಿದ ಸುನಿಲ್ ಗವಾಸ್ಕರ್ ರನ್ನು ಕಮೆಂಟರಿಯಿಂದಲೇ ಕೈಬಿಡಬೇಕೆಂಬ ಒತ್ತಾಯವೂ ಕೇಳಿಬಂದಿದೆ.
ಕೊಹ್ಲಿ-ಅನುಷ್ಕಾ ಕ್ರಿಕೆಟ್ ಕಮೆಂಟ್ ವಿವಾದಕ್ಕಿಡಾದ ಸುನಿಲ್ ಗವಾಸ್ಕರ್
Follow Us