ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಯಶ್ ರಾಜ್ ಫಿಲ್ಮ್ ಸಂಸ್ಥೆಯ ಆದಿತ್ಯ ಚೋಫ್ರಾ ಅವರ ಹೇಳಿಕೆ ಪಡೆದಿದ್ದಾರೆ. ಇಂದು ಪೊಲೀಸರ ವಿಚಾರಣೆಗೆ ಹಾಜರಾದ ಆದಿತ್ಯ ಚೋಫ್ರಾ ತಮ್ಮ ಹೇಳಿಕೆ ನೀಡಿದ್ದಾರೆ. ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆಯಲ್ಲ. ಅವರನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಬಲವಾಗಿ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ಪೊಲೀಸರು ರಿಯಾ ಚಕ್ರವರ್ತಿ ಸೇರಿದಂತೆ ಹಲವು ಸೆಲೆಬ್ರಿಟಿಗಳ ಹೇಳಿಕೆ ಪಡೆದಿದ್ದರು.
ಈ ಮಧ್ಯೆ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆತ್ಮಹತ್ಯೆಗೆ ಪ್ರೆರೇಪಿಸಿದ ಶಕ್ತಿಗಳು ಅಥವಾ ನಿರ್ಮಾಣವಾದ ಪರಿಸ್ಥಿತಿಯ ಆಯಾಮ ಕುರಿತಂತೆ ತನಿಖೆ ಸಾಧ್ಯತೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.