ಹೈದರಾಬಾದ್: ಇಪ್ಪತ್ತು ರೂಪಾಯಿಯ ಚಾಕಲೇಟ್ ಕದ್ದ ಆರೋಪಕ್ಕೆ ಗುರಿಯಾದ ಪಿ ಯು ಸಿ ವಿದ್ಯಾರ್ಥಿಯೊಬ್ಬ ಮಾಲ್ ನಲ್ಲಿಯೇ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಹೈದರಾಬಾದ್ ಹೊರವಲಯದ ಸುಷ್ಮಾ ಥಿಯೇಟರ್ ಬಳಿ ಇರುವ ಮಾಲ್ ನಲ್ಲಿ ಈ ಘಟನೆ ಸಂಭವಿಸಿದೆ. ಮೃತಪಟ್ಟವನನ್ನು ಲವೋದಯ ಸತೀಶ್ ಎಂದು ಗುರುತಿಸಲಾಗಿದೆ. ಮೂವರು ಸಹಪಾಠಿಗಳೊಂದಿಗೆ ಮಾಲ್ ಗೆ ಆಗಮಿಸಿದ್ದ ಸತೀಶ್, ಚಾಕಲೇಟ್ ಕದ್ದಿದ್ದ ಎಂದು ಹೇಳಲಾಗಿದೆ. ಇದನ್ನು ಭದ್ರತಾ ಸಿಬ್ಬಂದಿ ಪತ್ತೆ ಹಚ್ಚಿದ್ದಾಗ ಅಸ್ವಸ್ಥಗೊಂಡ ಸತೀಶ್ ಸಾವನ್ನಪ್ಪಿದ್ದ ಎಂದು ಹೇಳಲಾಗುತ್ತಿದೆ. ಆದರೆ, ಸತೀಶ್ ಪೋಷಕರು ಮಾತ್ರ ಈ ವಾದವನ್ನು ತಳ್ಳಿಹಾಕಿದ್ದಾರೆ. ಮಗನ ಸಾವಿಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಖಂಡಿಸಿ ಉದ್ರಿಕ್ತ ಗುಂಪೊಂದು ಮಾಲ್ ನ ಗಾಜುಗಳನ್ನು ಧ್ವಂಸಗೊಳಿಸಿದೆ. ಕಳೆದ ವಾರ ಕೇರಳದ ಕಲ್ಲಿಕೋಟೆಯಲ್ಲಿ ಮಹಿಳೆಯೊಬ್ಬರು ಮೆಣಸಿನ ಹುಡಿ ಕದ್ದಿದ್ದಾರೆ ಎಂದು ಆರೋಪಿಸಿ ಅವರನ್ನು ಏಳು ಗಂಟೆಗಳ ಕಾಲ ಕೋಣೆಯೊಂದರಲ್ಲಿ ಕೂಡಿ ಹಾಕಲಾಗಿತ್ತು.