newsics.com
ನವದೆಹಲಿ: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಂತ ಆರ್ಯ ಸಮಾಜದ ಮುಖಂಡ ಸ್ವಾಮಿ ಅಗ್ನಿವೇಶ್ (80) ಶುಕ್ರವಾರ ನಿಧನರಾದರು.
ಕಳೆದ ಹಲವು ದಿನಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಫಲಕಾರಿಯಾಗದೇ ಶುಕ್ರವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಹಾಗೂ ಆರ್ಯ ಸಮಾಜದ ಮುಖಂಡ ಸ್ವಾಮಿ ಅಗ್ನಿವೇಶ್ ಅವರು ಕಳೆದ ಕೆಲ ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದಾಗಿ ದೆಹಲಿಯ ಐ ಎಲ್ ಬಿ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 80ರ ಹರೆಯದ ಅಗ್ನಿವೇಶ್ ಹರ್ಯಾಣದ ಮಾಜಿ ಶಾಸಕರಾಗಿದ್ದು, 1970ರಲ್ಲಿ ಆರ್ಯ ಸಮಾಜದ ತತ್ವಗಳನ್ನು ಆಧರಿಸಿದ ಆರ್ಯ ಸಭಾ ಎಂಬ ರಾಜಕೀಯ ಪಕ್ಷ ಸ್ಥಾಪಿಸಿದ್ದರು. ಸೆಪ್ಟೆಂಬರ್ 21, 1939ರಂದು ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಜನಿಸಿದ್ದ ಅವರು ಹರಿಯಾಣದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಆರ್ಯ ಸಮಾಜದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಜೀತದಾಳುಗಳ ವಿಮುಕ್ತಿಗಾಗಿ ಹೋರಾಡಲೆಂದು 1981ರಲ್ಲಿ ಬಾಂಡೆಡ್ ಲೇಬರ್ ಲಿಬರೇಶನ್ ಫ್ರಂಟ್ ಸ್ಥಾಪಿಸಿದ್ದರು. 2004ರಿಂದ 2014ರವರೆಗೆ ಆರ್ಯ ಸಮಾಜದ ವಿಶ್ವ ಮಂಡಳಿಯ ಅಧ್ಯಕ್ಷರಾಗಿದ್ದರು. 1994ರಿಂದ 2004ರವರೆಗೆ ವಿಶ್ವಸಂಸ್ಥೆಯ ಜೀತ ವಿಮುಕ್ತಿಗಾಗಿನ ನಿಧಿಯ ಅಧ್ಯಕ್ಷರಾಗಿದ್ದರು.
ಸ್ವಾಮಿ ಅಗ್ನಿವೇಶ್ ಇನ್ನಿಲ್ಲ
Follow Us