ತಿರುವನಂತಪುರಂ: ಕೇರಳ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿರುವ 30 ಕಿಲೋ ಚಿನ್ನ ಕಳ್ಳಸಾಗಾಟದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಕೇರಳದ ಮುಖ್ಯಮಂತ್ರಿ ಕಚೇರಿಯಲ್ಲಿ ಭಾರೀ ಪ್ರಭಾವ ಹೊಂದಿದ್ದರು ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ. ಕೊಚ್ಚಿ ನ್ಯಾಯಾಲಯದಲ್ಲಿ ಸ್ವಪ್ನಾ ಸುರೇಶ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಎನ್ ಐ ಎ ಈ ಮಾಹಿತಿ ಬಹಿರಂಗ ಪಡಿಸಿದೆ.
ಮುಖ್ಯಮಂತ್ರಿ ಕಚೇರಿ ಮಾತ್ರವಲ್ಲ. ಕೇರಳದ ಪೊಲೀಸ್ ಇಲಾಖೆಯಲ್ಲಿ ಕೂಡ ಅವರು ಪ್ರಭಾವ ಬೀರುವಷ್ಟು ಶಕ್ತರಾಗಿದ್ದಾರೆ ಎಂದು ಎನ್ ಐ ಎ ನ್ಯಾಯಾಲಯದ ಗಮನಕ್ಕೆ ತಂದಿದೆ. ಹಲವು ಮಂದಿಗೆ ಬೆದರಿಕೆ ಕೂಡ ಒಡ್ಡಿದ್ದರು ಎಂದು ಎನ್ ಐ ಎ ಬಹಿರಂಗಪಡಿಸಿದೆ.
ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಲಯ ಆಗಸ್ಟ್ 10ರಂದು ಜಾಮೀನು ಕುರಿತು ತೀರ್ಪು ನೀಡಲಿದೆ. ಈ ಮಧ್ಯೆ ಕೇರಳ ಮುಖ್ಯಮಂತ್ರಿ ಕಚೇರಿ ಕುರಿತಂತೆ ಎನ್ ಐ ಎ ಹೊಸ ಮಾಹಿತಿ ಬಹಿರಂಗಪಡಿಸಿರುವುದರಿಂದ ಸಿಎಂ ಪಿಣರಾಯಿ ವಿಜಯನ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.