ತಿರುವನಂತಪುರಂ: ಕೇರಳ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿರುವ 30 ಕಿಲೊ ಚಿನ್ನ ಕಳ್ಳ ಸಾಗಾಟದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಹಾರಾಷ್ಟ್ರದ ಅಂಬೇಡ್ಕರ್ ವಿಶ್ವ ವಿದ್ಯಾನಿಲಯದಿಂದ ಪಡೆದ ಬಿಕಾಂ ಪದವಿ ದಾಖಲೆಯನ್ನು ಸ್ವಪ್ನಾ ಸುರೇಶ್ ನೀಡಿದ್ದರು. ಆದರೆ ಈ ವಿಶ್ವ ವಿದ್ಯಾನಿಲಯ ಸ್ವಪ್ನಾ ಅವರಿಗೆ ಯಾವುದೇ ಪದವಿ ಸರ್ಟಿಫಿಕೇಟ್ ನೀಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ 7 ದಿನ ಕಳೆದರೂ ಸ್ವಪ್ನಾ ಸುರೇಶ್ ಅವರನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ತಿರುವನಂತಪುರಂನಲ್ಲಿ ಟ್ರಿಪಲ್ ಲಾಕ್ ಡೌನ್ ಜಾರಿಯಲ್ಲಿದ್ದರೂ ಸ್ವಪ್ನಾ ಸುರೇಶ್ ಅವರನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಇದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ರಾಜ್ಯ ಸರ್ಕಾರ ಸ್ವಪ್ನಾ ಸುರೇಶ್ ಅವರಿಗೆ ರಕ್ಷಣೆ ನೀಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ
ಇನ್ನೊಂದೆಡೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೊರೋನಾ ನಿರ್ಬಂಧ ಉಲ್ಲಂಘಿಸಿ ನಾಯಕರು ಪ್ರತಿಭಟನೆ ನ಼ಡೆಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ