ನವದೆಹಲಿ: ಮಾರಣಾಂತಿಕ ಕೊರೋನಾ ವೈರಸ್ ಸೋಂಕು ಹಳ್ಳಿಗಳಿಗೆ ಹರಡದಂತೆ ನೋಡಿಕೊಳ್ಳುವುದು ದೇಶದ ಮುಂದಿರುವ ಅತಿ ದೊಡ್ಡ ಸವಾಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲಾಕ್ಡೌನ್ ನಿಯಮಗಳಲ್ಲಿ ಸಡಿಲಿಕೆ ಮಾಡಿರುವುದರಿಂದ ಈ ಮಾರಕ ರೋಗವು ಹಳ್ಳಿಗಳಿಗೆ ಹರಡದಂತೆ ನೋಡಿಕೊಳ್ಳುವುದು ಅತಿ ದೊಡ್ಡ ಸವಾಲಾಗಿದೆಯೆಂದು ಪ್ರಧಾನಿ ತಿಳಿಸಿದರು.
ಸೋಮವಾರ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಪ್ರಧಾನಿ ಈ ಭೀಕರ ಸೋಂಕಿನ ವಿರುದ್ಧ ಹೋರಾಟದಲ್ಲಿ ರಾಜ್ಯಗಳ ಪಾತ್ರವನ್ನು ಶ್ಲಾಘಿಸಿದರು. ಮಾರ್ಚ್ 25ರಂದು ಲಾಕ್ಡೌನ್ ಹೇರಿಕೆಯಾದ ಬಳಿಕ ಪ್ರಧಾನಿಯವರು ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ನಲ್ಲಿ ನಡೆಸಿದ ಐದನೆ ಸಭೆ ಇದಾಗಿದೆ.
ಲಾಕ್ಡೌನ್ನ ಮಾರ್ಗದರ್ಶಿ ಸೂತ್ರಗಳ ಅನುಷ್ಠಾನದಲ್ಲಿ ನ್ಯೂನತೆಗಳುಂಟಾದ ಕಡೆಗಳಲ್ಲಿ ಕೊರೋನಾ ಸಮಸ್ಯೆ ಉಲ್ಬಣಗೊಂಡಿದೆ ಎಂದು ಪ್ರಧಾನಿ ಹೇಳಿದರು.
ಕೊರೋನಾ ಪಿಡುಗಿನ ಈ ಸಮಯದಲ್ಲಿ ಜನರು ತಾವಿರುವಲ್ಲೇ ಇರಲು ಶ್ರಮಿಸುವುದು ಅಗತ್ಯವಾಗಿದೆ. ಜನರು ತಮ್ಮ ಊರಿಗೆ ಹೋಗಬೇಕೆಂದು ಬಯಸಿದ್ದರಿಂದ ಮಾನವೀಯ ನೆಲೆಯಿಂದ ಅದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಮೋದಿ ತಿಳಿಸಿದರು.