newsics.com
ಊಟಿ(ತಮಿಳುನಾಡು): ನೋಡ ನೋಡುತ್ತಿದ್ದಂತೆ ಹೆಲಿಕಾಪ್ಟರ್‌ವೊಂದು ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿಯಲಾರಂಭಿಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ದೊಡ್ಡ ಸದ್ದು ಕೇಳಿಸಿತು. ತಕ್ಷಣ ಹೊರಬಂದು ನೋಡಿದಾಗ ಹೆಲಿಕಾಪ್ಟರ್ ಬೀಳುತ್ತಿದ್ದುದು ಕಾಣಿಸಿತು ಎಂದು ಕೃಷ್ಣಸ್ವಾಮಿ ಹೇಳಿದ್ದಾರೆಂದು ವರದಿ ತಿಳಿಸಿದೆ.
ಹೆಲಿಕಾಪ್ಟರ್ ಪತನಗೊಳ್ಳುತ್ತಿರುವುದನ್ನು ನೋಡಿದ ಕೃಷ್ಣ ಸ್ವಾಮಿಯ ಪ್ರಕಾರ, ನನಗೆ ಮನೆಯಲ್ಲಿದ್ದಾಗ ಮೊದಲು ದೊಡ್ಡ ಶಬ್ಧ ಕೇಳಿ ಬಂತು. ಹೊರ ಬಂದು ನೋಡುತ್ತಿದ್ದಂತೆ ಹೆಲಿಕಾಪ್ಟರ್ ಮರಕ್ಕೆ ಡಿಕ್ಕಿ ಹೊಡೆದು ದೊಡ್ಡ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತು. ಬಳಿಕ ಇನ್ನೊಂದು ಮರಕ್ಕೆ ಹೆಲಿಕಾಪ್ಟರ್ ಡಿಕ್ಕಿ ಹೊಡೆದಿದೆ. ಈ ವೇಳೆ ಮೂವರು ಹೆಲಿಕಾಪ್ಟರ್‌ನಿಂದ ಜಿಗಿಯುತ್ತಿರುವುದನ್ನು ಗಮನಿಸಿದೆ ಎಂದಿದ್ದಾರೆ.
ಇನ್ನೋರ್ವ ಪ್ರತ್ಯಕ್ಷದರ್ಶಿ, ಮಂಜು ತುಂಬಿಕೊಂಡಿದ್ದ ಕಾರಣ ಹೆಲಿಕಾಪ್ಟರ್ ಮರಕ್ಕೆ ಡಿಕ್ಕಿ ಹೊಡೆದಿದೆ. ನಾನು ಸ್ಥಳಕ್ಕೆ ಹೋಗುತ್ತಿದ್ದಂತೆ ಬೆಂಕಿ ಹೊತ್ತಿ ಉರಿಯುತ್ತಿತ್ತು ಎಂದಿದ್ದಾರೆ.
ಭಾರತೀಯ ರಕ್ಷಣಾ ಪಡೆಯ ಮುಖ್ಯಸ್ಥರಾದ ಸಿಡಿಎಸ್ ಬಿಪಿನ್ ರಾವತ್ ಸಂಚರಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನಗೊಂಡ ಪರಿಣಾಮ ರಾವತ್ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ.
ರಾವತ್ ದಂಪತಿ ಸೇರಿ 14 ಮಂದಿ Mi-17V5 ಸೇನಾ ಹೆಲಿಕಾಪ್ಟರ್‌ನಲ್ಲಿ ತಮಿಳುನಾಡಿನ ವೆಲ್ಲಿಂಗ್ಟನ್‍ಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಊಟಿ ಬಳಿಯ ಕೂನೂರಿನ ಸಮೀಪ ಬರುತ್ತಿದ್ದಂತೆ ಹೆಲಿಕಾಪ್ಟರ್ ಹವಾಮಾನ ವೈಪರೀತ್ಯದಿಂದಾಗಿ ಪತನಗೊಂಡಿದೆ ಎಂದು ವರದಿಗಳು ತಿಳಿಸಿವೆ.
ಪೈಲಟ್ ಸಿಂಗ್ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, 80ರಷ್ಟು ಸುಟ್ಟ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.