ತಿರುವಳ್ಳೂರು: ಒಂದು ವರ್ಷದ ಹಿಂದೆ ನಿಶ್ವಿತಾರ್ಥ… ಬೆಳಗ್ಗೆ ಮದುವೆ, ರಾತ್ರಿ ವಧುವಿನ ಹತ್ಯೆ… ಮಾರನೇ ದಿನ ವರ ಆತ್ಮಹತ್ಯೆಗೆ ಶರಣು.
ಇಂತಹದೊಂದು ವಿಚಿತ್ರ ಪ್ರಕರಣಕ್ಕೆ ತಮಿಳುನಾಡು ಸಾಕ್ಷಿಯಾಗಿದೆ. ತಮಿಳುನಾಡಿನ ತಿರುವಳ್ಳೂರು ಸಮೀಪದ ಪೊನ್ನೇರಿಯಲ್ಲಿ ಘಟನೆ ನಡೆದಿದ್ದು ನವವಧು 22 ವರ್ಷದ ಸಂಧ್ಯಾ ಪತಿ 28 ವರ್ಷದ ನೇತಿ ವಾಸನ್’ನಿಂದ ಮದುವೆಯಾದ ದಿನವೇ ಕೊಲೆಯಾಗಿದ್ದಾಳೆ.
ಸಂಧ್ಯಾ ಹತ್ಯೆ ಮಾಡಿದ ಬಳಿಕ ನೇತಿ ವಾಸನ್ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಂಧ್ಯಾ ಮತ್ತು ನೇತಿ ವಾಸನ್’ಗೆ ಕಳೆದ ಒಂದು ವರ್ಷದ ಹಿಂದೆ ಮದುವೆ ನಿಶ್ಚಯವಾಗಿತ್ತು. ಮಾರ್ಚ್’ನಲ್ಲಿ ಮದುವೆಯಾಗಬೇಕಿತ್ತು. ಲಾಕ್ ಡೌನ್’ನಿಂದ ಮುಂದೂಡಲ್ಪಟ್ಟ ಮದುವೆಯನ್ನು ಜೂನ್ 10 ರಂದು ಸ್ಥಳೀಯ ದೇವಾಲಯದಲ್ಲಿ ನೆರವೇರಿಸಲಾಗಿತ್ತು. ರಾತ್ರಿ 10 ಗಂಟೆ ವೇಳೆಗೆ ನೇತಿ ವಾಸನ್ ತನ್ನ ಕೋಣೆಯಿಂದ ಹೊರಕ್ಕೆ ಓಡಿಬಂದಿದ್ದು ಮನೆಯವರು ಕೋಣೆ ಪರಿಶೀಲಿಸಿದ ವೇಳೆ ಸಂಧ್ಯಾ ಶವ ಪತ್ತೆಯಾಗಿದೆ.
ಪೋಷಕರ ಮಾಹಿತಿ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನೇತಿ ವಾಸನ್’ಗಾಗಿ ಹುಡುಕಾಟ ನಡೆಸಿದ್ದರು. ಮಾರನೇ ದಿನ ಅಂದ್ರೆ ಗುರುವಾರ ನೇತಿ ವಾಸನ್ ಶವ ಊರ ಹೊರಗಿನ ಮರದಲ್ಲಿ ನೇತಾಡುತ್ತಿತ್ತು ಎನ್ನಲಾಗಿದೆ. ಈ ಅವಳಿ ಸಾವಿನ ದೃಶ್ಯ ಕಂಡು ಗ್ರಾಮಸ್ಥರು ಕಂಗಾಲಾಗಿದ್ದಾರೆ.