newsics.com
ಭೋಪಾಲ್: ಕುನೋ ಪಾರ್ಕ್‌ನಲ್ಲಿ ಗುರುವಾರ ಮತ್ತೆರಡು ಚೀತಾ ಮರಿಗಳು ಸಾವನ್ನಪ್ಪಿವೆ. ಇನ್ನೊಂದು ಮರಿಯ ಸ್ಥಿತಿ ಗಂಭೀರವಾಗಿದೆ.
ಎರಡು ತಿಂಗಳ ಹಿಂದೆ ಜ್ವಾಲಾ ಹೆಸರಿನ ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಇದರಲ್ಲಿ ಒಂದು ಮರಿ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಸಾವು ಕಂಡಿದ್ದರೆ, ಗುರುವಾರ ಮತ್ತೆರಡು ಮರಿಗಳು ಪ್ರಾಣಬಿಟ್ಟಿವೆ. ಇದರೊಂದಿಗೆ ಕಳೆದ ಎರಡು ತಿಂಗಳಲ್ಲಿ 6 ಚೀತಾಗಳು ಸಾವು ಕಂಡಂತಾಗಿದೆ.
ಚೀತಾಗಳನ್ನು ಭಾರತದಲ್ಲಿ ಮರು ಸ್ಥಾಪಿಸುವ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ನಮೀಬಿಯಾದಿಂದ 8 ಹಾಗೂ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಇದರಲ್ಲಿ ಜ್ವಾಲಾ ಹೆಸರಿನ ಚೀತಾ ಭಾರತದಲ್ಲಿಯೇ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದರಿಂದ ಒಟ್ಟು ಚೀತಾಗಳ ಸಂಖ್ಯೆ 24 ಆಗಿತ್ತು. ಆರು ಚೀತಾಗಳ ಸಾವಿನೊಂದಿಗೆ ದೇಶದಲ್ಲಿರುವ ಚೀತಾಗಳ ಸಂಖ್ಯೆ ಈಗ 18ಕ್ಕೆ ಇಳಿದಿದೆ.
ಹವಾಮಾನ ವೈಪರೀತ್ಯ ಮತ್ತು ನಿರ್ಜಲೀಕರಣ ಕಾರಣದಿಂದಾಗಿ ಇವುಗಳು ಸಾವನ್ನಪ್ಪಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.