ಚೆನ್ನೈ: ತಮಿಳುನಾಡು ಭಾರತೀಯ ಜನತಾ ಪಕ್ಷ(ಬಿಜೆಪಿ) ಸಿನಿಮಾರಂಗ, ಸೆಲೆಬ್ರಿಟಿಗಳಿಗೆ ಮಣೆ ಹಾಕಿದೆ. ಮುಂದಿನ ವರ್ಷದ ಚುನಾವಣೆಗೂ ಮುನ್ನ ಪಕ್ಷದ ಸದಸ್ಯ ಬಲ ಹೆಚ್ಚಿಸಲು ರಾಜ್ಯಾಧ್ಯಕ್ಷ ಎಲ್. ಮುರುಗನ್ ಮುಂದಾಗಿದ್ದಾರೆ.
ದಂತಚೋರ, ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಅವರು ಬಿಜೆಪಿ ಸೇರಿ ಕೆಲವೇ ಸಮಯದಲ್ಲಿ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ವೀರಪ್ಪನ್ ಪುತ್ರಿ ವಿದ್ಯಾ ವೃತ್ತಿಯಿಂದ ವಕೀಲೆಯಾಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಬೀಗರಾದ ನಟ ಧನುಷ್ ತಂದೆ ಕಸ್ತೂರಿ ರಾಜಾ ಅವರೂ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ.
ಎಐಎಡಿಎಂಕೆ ಸ್ಥಾಪಕ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಎಂ.ಜಿ. ರಾಮಚಂದ್ರನ್ ಅವರ ದತ್ತುಪುತ್ರಿ ಗೀತಾ ಎಂಬುವರಿಗೂ ಬಿಜೆಪಿ ಕಾರ್ಯಕಾರಿಣಿಯಲ್ಲಿ ಸ್ಥಾನ ಸಿಕ್ಕಿದೆ. ಎಂಜಿಆರ್ ಸೋದರ ಎಂಸಿ ಚಕ್ರಪಾಣಿ ಅವರ ಮೊಮ್ಮಗ ಆರ್ ಪ್ರವೀಣ್, ನಟ ರಾಧಾರವಿ ಜತೆಗೆ ನಟ ವಿಜಯಕುಮಾರ್, ನಿರ್ದೇಶಕ ಗಂಗೈ ಅಮರನ್ ಅವರನ್ನು ವಿಶೇಷ ಸಂಘಟಕರನ್ನಾಗಿ ನೇಮಕ ಮಾಡಲಾಗಿದೆ. ಸಂಗೀತ ನಿರ್ದೇಶಕ ದೀನಾ, ನಿರ್ದೇಶಕ ಪೆರಾರಸು ಅವರು ಕಲೆ ಮತ್ತು ಸಂಸ್ಕೃತಿ ವಿಭಾಗದ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ನಟ ಆರ್ ಕೆ ಸುರೇಶ್ ಅವರಿಗೆ ಒಬಿಸಿ ಸೆಲ್ ನ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. 38ಕ್ಕೂ ಅಧಿಕ ಕಚೇರಿ ನಿರ್ವಾಹಕರನ್ನು ನೇಮಿಸಿರುವ ಮುರುಗನ್, ಯುವ ಮೋರ್ಚಾ, ಮಹಿಳಾ ಮೋರ್ಚಾ, ಮೀನುಗಾರರು, ನೇಕಾರರು ಹಾಗೂ ಅಲ್ಪಸಂಖ್ಯಾತ ಘಟಕಗಳಿಗೂ ಪದಾಧಿಕಾರಿಗಳನ್ನು ನೇಮಿಸಿದ್ದಾರೆ.
ಕಾಡುಗಳ್ಳ ವೀರಪ್ಪನ್ ಪುತ್ರಿ ಈಗ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷೆ!
Follow Us