Wednesday, July 6, 2022

ಪೊಲೀಸ್ ಬೂಟಿನ ಸದ್ದು ಕೇಳುತ್ತಲೇ ಬೆಳೆದ ವೀರಪ್ಪನ್ ಮಗಳೀಗ ಬಿಜೆಪಿ ನಾಯಕಿ!

Follow Us

 ಆ ಕೆ ಹುಟ್ಟು ಯಾರಿಗೆ ಸಂಭ್ರಮ ತಂದಿತ್ತೋ ಗೊತ್ತಿಲ್ಲ. ಯಾಕೆಂದರೆ ಆಕೆ ಹುಟ್ಟುವಾಗ ತಂದೆ ಎನ್ನಿಸಿಕೊಂಡಾತ ಆಕೆಯೊಂದಿಗೆ ಇರಲಿಲ್ಲ. ಎಲ್ಲ ಮಕ್ಕಳು ಜೋಗುಳದ ಸದ್ದು ಕೇಳುತ್ತ ಬೆಳೆದರೆ ಆಕೆ ಮಾತ್ರ ಪೊಲೀಸರ ಬೂಟು ಮತ್ತು ಲಾಠಿ ಸದ್ದು ಕೇಳುತ್ತ ಬೆಳೆದಳು. ಎಲ್ಲರ ಅಮ್ಮಂದಿರು ಚಾಕೋಲೇಟ್ ತರಲು ಹೋಗಿ ಬರುವ ಹೊತ್ತಿನಲ್ಲಿ ಆಕೆಯ ತಾಯಿ ಮಾತ್ರ ಸದಾಕಾಲ ಪೊಲೀಸ್ ಇನ್ವೆಸ್ಟಿಗೇಶನ್ ಹೆಸರಿನಲ್ಲಿ ನರಕ ನೋಡಿ ಬರುತ್ತಿದ್ದಳು.
ಇಂತಹದೊಂದು ವಾತಾವರಣದಲ್ಲಿ ಬೆಚ್ಚನೆಯ ನೆನಪು ಮೂಡಿಸಬಲ್ಲ ಯಾವುದೇ ನೆನಪುಗಳಿಲ್ಲದೇ ಬಾಲ್ಯ ಕಳೆದ ಆಕೆ ಇಂದು ಕಾನೂನು ಪದವೀಧರೆ. ಅಷ್ಟೇ ಅಲ್ಲ, ದೇಶದ ಚುಕ್ಕಾಣಿ ಹಿಡಿದಿರುವ ಆಡಳಿತ ಪಕ್ಷದ ಸದಸ್ಯೆ. ಅಷ್ಟೇ ಯಾಕೆ, ತಮಿಳುನಾಡಿನ ಬಿಜೆಪಿಯುವ ಮೋರ್ಚಾದ ಉಪಾಧ್ಯಕ್ಷೆ.
ಇಷ್ಟಕ್ಕೂ ನಾವು ಹೇಳ ಹೊರಟಿರೋದು ಯಾರ ಬಗ್ಗೆ ಅನ್ನೋದು ನಿಮಗೆ ಅರಿವಾಗಿರಬೇಕಲ್ಲ. ಆಕೆ ಮತ್ಯಾರೂ ಅಲ್ಲ. ಒಂದು ಕಾಲದಲ್ಲಿ ಕಾಡುಗಳ್ಳ ಎನ್ನಿಸಿಕೊಂಡು ಪೊಲೀಸರ ಪಾಲಿಗೆ ನರಹಂತಕನಾಗಿದ್ದ ವೀರಪ್ಪನ್ ಎಂಬ ಕುಖ್ಯಾತನ ಮಗಳು ವಿದ್ಯಾರಾಣಿ.
ವಿದ್ಯಾರಾಣಿ ವೀರಪ್ಪನ್ ಮಗಳು ಅನ್ನೋದನ್ನು ಬಿಟ್ಟರೆ ಮತ್ಯಾವ ವಿಚಾರದಲ್ಲೂ ಆಕೆಯ‌ ಮೇಲೆ ಆತನ ಕರಿನೆರಳು ಬಿದ್ದಿಲ್ಲ. ತಮಿಳುನಾಡಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ವಿದ್ಯಾ ರಾಣಿ ಕಾನೂನು ಪದವಿ ಪಡೆದು ಕೆಲಕಾಲ ವಕೀಲಿಕೆಯನ್ನೂ ಮಾಡಿದ್ದಾರೆ.
2011ರಲ್ಲಿ ತಾಯಿ ಹಾಗೂ ತನ್ನ ಸಮುದಾಯದ ಎಲ್ಲರ ವಿರೋಧದ ನಡುವೆ ಪ್ರೇಮ ವಿವಾಹವಾಗಿ ಬದುಕು ಕಟ್ಟಿಕೊಂಡಿರುವ ವಿದ್ಯಾರಾಣಿ ಕೃಷ್ಣಗಿರಿಯಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದಾರೆ.
ಬಹುತೇಕ ಬಾಲ್ಯದ ದಿನಗಳನ್ನು ಜೈಲು ಹಾಗೂ ಪೊಲೀಸ್ ಕಸ್ಟಡಿಯಲ್ಲಿ ಕಳೆದಿರುವ ವಿದ್ಯಾರಾಣಿ ಅದೇ ವರವಾಗಿ ಆಕೆ ಶಿಕ್ಷಣ ಪಡೆದುಕೊಂಡು ಸಮಾಜದ ಮುಖ್ಯವಾಹಿನಿ‌ ಸೇರೋದಕ್ಕೆ ನೆರವಾಗಿದೆ.
ತಂದೆ ವೀರಪ್ಪನ್ ಕನಸು:
ನಾನು ಯಾವುದೇ ಸಮುದಾಯವನ್ನು ಪ್ರತಿನಿಧಿಸಲು ಇಚ್ಛಿಸುವುದಿಲ್ಲ ಎನ್ನುವ ವಿದ್ಯಾರಾಣಿ, ನನಗೆ ಮಾನವೀಯತೆಯಲ್ಲಿ ನಂಬಿಕೆ ಇದೆ. ಅದಕ್ಕಾಗಿ ಈಗ ನಾನು ರಾಜಕೀಯಕ್ಕೂ ಸೇರಿದ್ದೇನೆ. ಜನಸೇವೆ ಮಾಡುವುದು ನನ್ನ ತಂದೆಯ ಕನಸಾಗಿತ್ತು ಎಂದಿದ್ದಾರೆ.
ಹಾಗಂತ ಎಲ್ಲ ‌ಮಕ್ಕಳಂತೆ ವಿದ್ಯಾರಾಣಿ ತನ್ನ ಬಾಲ್ಯವನ್ನು ತಂದೆಯ ತೊಡೆಯೇರಿ ಕಳೆದಿಲ್ಲ. ಆಕೆಯ ಪಾಲಿಗೆ ತಂದೆ ಎಂಬಾತ ಒಮ್ಮೆ ಭೇಟಿಯಾದ ಬಂಧುವಷ್ಟೇ.
ಅಜ್ಜನ ಮನೇಲಿ ಐದು ನಿಮಿಷ ಸಿಕ್ಕಿದ್ರು ಅಪ್ಪ:
ತಂದೆಯನ್ನು ಭೇಟಿ ಮಾಡಿದ ಕ್ಷಣಗಳನ್ನು ಉಲ್ಲೇಖಿಸುವ ವಿದ್ಯಾರಾಣಿ ನನಗಾಗ 6-7 ವಯಸ್ಸಿರಬೇಕು. ಶಾಲೆಗೆ ಬೇಸಿಗೆ ರಜವಿತ್ತು. ಹೀಗಾಗಿ ನಾನು ಕರ್ನಾಟಕದ ಹನೂರಿನ ಗೋಫಿನಾಥಂನಲ್ಲಿರುವ ನನ್ನ ಅಜ್ಜನ ಮನೆಗೆ ಹೋಗಿದ್ದೆ. ಅಲ್ಲಿಗೆ ಅಪ್ಪ ಅಚಾನಕ್ ಆಗಿ ಬಂದಿದ್ದರು. ನಾನು ಮಕ್ಕಳೊಂದಿಗೆ ಆಟವಾಡುತ್ತಿದ್ದೆ. ಆ ಸ್ಥಳಕ್ಕೆ ಬಂದ ಅವರು, ಐದಾರು ನಿಮಿಷ ನನ್ನೊಂದಿಗೆ ಮಾತನಾಡಿದರು. ಚೆನ್ನಾಗಿ ಓದು. ಎಲ್ಲರಿಗೂ ಒಳ್ಳೆಯದನ್ನು ಮಾಡು. ವೈದ್ಯೆಯಾಗಿ ಜನರ ಸೇವೆ ಮಾಡು ಎಂದು ಹಾರೈಸಿದ್ದರು. ಇದೇ ನನ್ನ ಬುತ್ತಿಯಲ್ಲಿರುವ ಅಪ್ಪನ ಸಿಹಿ ನೆನಪಿನ ತುತ್ತು ಎನ್ನುತ್ತಾರೆ.
ನನ್ನಪ್ಪ ವೀರಪ್ಪನ್ ಬಡವರ ಪರವಾಗಿದ್ದರು…:
ನನಗೆ ತಿಳಿವಳಿಕೆ‌ ಬರುವ ಹೊತ್ತಿಗೆ ನನ್ನ ತಂದೆ ಇಲ್ಲವಾಗಿದ್ದರು. ಅವರ ಸುತ್ತಲೂ ಇದ್ದ ವಾತಾವರಣ ಅವರಿಗೆ ಅಂತಹ ಸಮಸ್ಯಾತ್ಮಕ ಹೆಜ್ಜೆ ಇಡಲು ಪ್ರೇರಣೆ ನೀಡಿರಬಹುದು. ಆದರೆ ಅವರ ಸಮಾಜಸೇವೆ ಹಾಗೂ ಬಡವರ ಮೇಲಿನ ಕನಿಕರದ ವ್ಯಕ್ತಿತ್ವ ನನಗೆ ಜನಸೇವೆಯ ಹಾದಿ ಆಯ್ದುಕೊಳ್ಳಲು ಪ್ರೇರಣೆ ನೀಡಿದೆ ಎನ್ನುತ್ತಾರೆ.
ವಿದ್ಯಾರಾಣಿ ರಾಜಕೀಯ ಸೇರ್ಪಡೆಗೆ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಸಲಹೆ ನೀಡಿದ್ದು, ೨೦೨೦ ಫೆಬ್ರವರಿಯಲ್ಲಿ ವಿದ್ಯಾರಾಣಿ ಬಿಜೆಪಿ ಸೇರ್ಪಡೆಗೊಂಡಿದ್ದು ಈಗ ಯುವಮೋರ್ಚಾ ಉಪಾಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ. ಬಿಜೆಪಿಯಂತಹ ಸಂಘ-ಪರಿವಾರದ ಹಿನ್ನೆಲೆಯ ಪಕ್ಷ ವಿದ್ಯಾರಾಣಿಯನ್ನು ಒಪ್ಪಿಕೊಂಡು ಹುದ್ದೆಯನ್ನು ನೀಡಿರೋದು ಹಲವರನ್ನು ಹುಬ್ಬೇರಿಸುವಂತೆ ಮಾಡಿದ್ದರೂ ವಿದ್ಯಾರಾಣಿಯ ವ್ಯಕ್ತಿತ್ವ ಹಾಗೂ ಸಾಧನೆಯೂ ಇದಕ್ಕೆ ಕಾರಣವಾಗಿರಬಹುದು ಎಂಬುದರಲ್ಲಿ ಸಂಶಯವಿಲ್ಲ.

ಮತ್ತಷ್ಟು ಸುದ್ದಿಗಳು

vertical

Latest News

ಕೇಂದ್ರ ಸಚಿವರ ರಾಜೀನಾಮೆ: ಸ್ಮೃತಿ ಇರಾನಿ, ಸಿಂಧಿಯಾಗೆ ಹೆಚ್ಚುವರಿ ಖಾತೆಗಳ ಹೊಣೆ

newsics.com ನವದೆಹಲಿ: ಮುಖ್ತಾರ್ ಅಬ್ಬಾಸ್ ನಖ್ವಿ ಅವರ ರಾಜೀನಾಮೆಯ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಈಗಾಗಲೇ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ...

ಫೈರಿಂಗ್ ರೇಂಜ್ ನಲ್ಲಿ ಆಕಸ್ಮಿಕ ಸ್ಫೋಟ: ಇಬ್ಬರು ಸೈನಿಕರಿಗೆ ಗಂಭೀರ ಗಾಯ

newsics.com ಶ್ರೀನಗರ: ಫೈರಿಂಗ್ ರೇಂಜ್ ನಲ್ಲಿ ಆಕಸ್ಮಿಕವಾಗಿ ಸ್ಫೋಟವಾದ ಹಿನ್ನೆಲೆ ಇಬ್ಬರು ಸೇನಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ. ಪೂಂಚ್ ಜಿಲ್ಲೆಯ ಜುಲ್ಲಾಸ್ ಪ್ರದೇಶದಲ್ಲಿ ಸೈನಿಕರು ಫೈರಿಂಗ್...

ಮೋದಿ ಸಚಿವ ಸಂಪುಟದಲ್ಲಿದ್ದ ಮುಖ್ತಾರ್ ಅಬ್ಬಾಸ್ ನಖ್ವಿ, ಆರ್​​ಸಿಪಿ ಸಿಂಗ್ ರಾಜೀನಾಮೆ

newsics.com ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಮುಖ್ತಾರ್​ ಅಬ್ಬಾಸ್ ನಖ್ವಿ ಹಾಗೂ ಆರ್​​ಸಿಪಿ ಸಿಂಗ್ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಇಬ್ಬರು ಸಚಿವರ ರಾಜ್ಯಸಭಾ ಸದಸ್ಯ...
- Advertisement -
error: Content is protected !!