ಸಿಲಿಗುರಿ: ಭಾರತದ ಬಗ್ಗೆ ಮಾತನಾಡುವ ಬದಲು ದಿನಪೂರ್ತಿ ಪಾಕಿಸ್ತಾನದ ಬಗ್ಗೆಯೇ ಮಾತನಾಡುತ್ತೀರಿ. ನೀವು ಭಾರತದ ಪ್ರಧಾನಿಯೋ ಅಥವಾ ಪಾಕಿಸ್ತಾನದ ರಾಯಭಾರಿಯೇ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ಶುಕ್ರವಾರ ಸಿಲಿಗುರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ದೀದಿ, ನೀವು ಭಾರತದ ಬಗ್ಗೆ ಮಾತನಾಡುವ ಬದಲು, ಯಾಕೆ ಯಾವಾಗಲೂ ನಮ್ಮ ದೇಶವನ್ನು ಪಾಕಿಸ್ತಾನದ ಜತೆ ಹೋಲಿಸುತ್ತೀರಿ? ಪಾಕಿಸ್ತಾನದಂತಾಗಲು ನಾವು ಬಯಸುವುದಿಲ್ಲ. ನಮ್ಮ ದೇಶವನ್ನು ನಾವು ಪ್ರೀತಿಸುತ್ತೇವೆ. ಅಲ್ಲಿನ ರಾಯಭಾರಿ ರೀತಿಯಲ್ಲಿ ದಿನಗಟ್ಟಲೆ ಪಾಕಿಸ್ತಾನದ ಬಗ್ಗೆಯೇ ಮೋದಿ ಮಾತನಾಡುತ್ತಿದ್ದಾರೆ ಎಂದು ಮಮತಾ ವಾಗ್ದಾಳಿ ನಡೆಸಿದರು.
ಸಂಸ್ಕೃತಿ ಮತ್ತು ಪರಂಪರೆಯಿಂದ ಶ್ರೀಮಂತವಾಗಿರುವ ಭಾರತವನ್ನು ಯಾಕೆ ಸದಾ ಪಾಕಿಸ್ತಾನದೊಂದಿಗೆ ಹೋಲಿಸುತ್ತೀರಿ ಎಂದು ಮಮತಾ ಪ್ರಶ್ನಿಸಿದ್ದಾರೆ.