ಆಯಕಟ್ಟಿನ ಸ್ಥಳದಲ್ಲಿ ಹಲಸಿನ ಹಣ್ಣಿನ ಗಿಡವನ್ನು ನೆಟ್ಟರೆ ಸಾಕು. ಯಾವುದೇ ರೀತಿಯಾದ ವಿಶೇಷ ಆರೈಕೆ ಬೇಡ. ಒಂದು ಬಾರಿ ಬೆಳೆದು ಮರವಾಗಿ ಫಲ ನೀಡಲಾರಂಭಿಸಿದರೆ ಯಾವುದೇ ಸಂದರ್ಭದಲ್ಲೂ ಹಸಿವಿನಿಂದ ನರಳುವ ಪರಿಸ್ಥಿತಿ ನಿಮಗೆ ಬರಲಾರದು. ಇದೆಂದೂ ತನ್ನನ್ನು ಸಾಕಿದವರ ಕೈಬಿಟ್ಟಿಲ್ಲ.
ಇಂದು ಹಲಸು ದಿನ
• ಸೀಮಾ ಪೋನಡ್ಕ
newsics.com@gmail.com
ಮಳೆಯನ್ನಾಧರಿಸಿದ ಅತ್ಯುತ್ತಮ ಬೆಳೆ ಈ ಹಲಸು. ಹಲಸಿನ ವೈಜ್ಞಾನಿಕ ಹೆಸರು ಅರ್ಟೋಕಾರ್ಪಸ್ ಹೆಟೆರೋಫಿಲ್ಲಸ್. ಇದು ಮೊರಸಿಯೆ ಕುಟುಂಬಕ್ಕೆ ಸೇರಿದ, ಅರ್ಟೋಕಾರ್ಪಸ್ ಇಂಟೆಗ್ರಿಫೋಲಿಯ ವರ್ಗಕ್ಕೆ ಸೇರಿದೆ. ಮೂಲವಾಗಿ ಈ ಹಣ್ಣಿನಲ್ಲಿ ಎರಡು ವಿಧ. ಬಕ್ಕೆ ಹಾಗೂ ಬೊಳುವ. ವಾದಾ, ಶ್ರೀವರ, ಸಿಂಧೂರ, ಕಳ್ಳಾಜೆ ರುದ್ರಾಕ್ಷಿ, ನಗರಚಂದ್ರ, ಸರಸ, ಪೆರ್ಡೂರು ಬಿಳಿ ಬಕಗಕೆ, ತುಷಾರ, ಅನನ್ಯ, ಕುದ್ದುಪದವು ಮಧುರಾ, ರಾಜ ರುದ್ರಾಕ್ಷಿ, ಮುದ್ರಾಕ್ಷಿ, ನಿರಂತರ, ಅನಂತ, ನಂದನ, ಶ್ರಾವಣ, ಪ್ರಶಾಂತಿ ಮೊದಲಾಗಿ ಸುಮಾರು ಎಂಭತ್ತಕ್ಕೂ ಅಧಿಕ ತಳಿಗಳನ್ನು ಕಾಣಬಹುದು.
ಹಲಸಿನ ಖಾದ್ಯ…
ಮುಳ್ಳಿನ ಕವಚಗಳ ನಡುವೆ ಅಡಗಿ ಕುಳಿತ ಹಳದಿ ಬಣ್ಣದ ತೊಳೆಗಳು, ನೋಡುತ್ತಿದ್ದಂತೆಯೇ ಹಲಸು ಪ್ರಿಯರ ಮನದಲ್ಲಿ ಹಲವು ಖಾದ್ಯಗಳ ನೆನಪನ್ನು ತರಿಸುತ್ತಾ, ಬಾಯಲ್ಲಿ ನೀರೂರುವಂತೆ ಮಾಡಿಬಿಡುತ್ತದೆ. ಹಲಸಿನ ಹಣ್ಣಿನ ಸೀಸನ್ ಶುರುವಾಯಿತೆಂದರೆ ಸಾಕು ಹಳ್ಳಿ ಮನೆಗಳ ಜನರಿಗೆ ಬಿಡುವಿಲ್ಲದ ಕೆಲಸ. ಹಲಸಿನ ಗುಜ್ಜೆ ಪಲ್ಯ, ತರಹೇವಾರು ಹಪ್ಪಳ-ಸಂಡಿಗೆಗೆಳು, ಚಿಪ್ಸ್ ಅಥವಾ ಆಡು ಭಾಷೆಯ ಸೋಂಟೆ, ಜಾಮ್, ಜೆಲ್ಲಿ, ಪಾನಕ. ಉಪ್ಪಿನಕಾಯಿ, ಸುಟ್ಟ ಹಲಸಿನ ಬೀಜ, ಸಾಂಬಾರ್ ಇವೆಲ್ಲವುಗಳೊಂದಿಗೆ ಹಲಸಿನಕಾಯಿ ದೋಸೆ, ಹಣ್ಣಿನ ಕಡುಬು ಅದೂ ಹಲವು ವಿಧಗಳಲ್ಲಿ. ಹಲಸಿನಕಾಯಿ ತೊಳೆಗಳನ್ನು ಉಪ್ಪು ನೀರಿನಲ್ಲಿ ಹಾಕಿಟ್ಟಲ್ಲಿ ಹಲವು ಸಮಯಗಳ ವರೆಗೂ ಅದನ್ನು ವಿವಿಧ ಖಾದ್ಯಗಳಿಗಾಗಿ ಬಳಸ ಬಹುದಾಗಿದೆ. ಉಪ್ಪುತೊಳೆ ರೊಟ್ಟಿ, ಹಣ್ಣಿನ ಮುಳ್ಕ, ಅಪ್ಪ ಕಜ್ಜಾಯ, ವಡೆ, ಉಂಡ್ಲಿಕಾಳು, ಪಲ್ಯ ಇತ್ಯಾದಿ ಇತ್ಯಾದಿಗಳನ್ನು ವರ್ಷಕೊಮ್ಮೆಯಾದರೂ ಸವಿಯದ್ದರೆ ಅದೇನೋ ಕಳೆದುಕೊಂಡ ಭಾವ.ಮಳೆಗಾಲದಲ್ಲಿ ಶಾಲೆಯಿಂದ ಹಿಂತಿರುಗಿ ಬರುವ ಸಂದರ್ಭದಲ್ಲಿ ಈ ಖಾದ್ಯಗಳೇನಾದರೂ ಸಿಕ್ಕಿಬಿಟ್ಟರೆ, ಮಕ್ಕಳಿಗೆ ಬೇರೇನೂ ಬೇಕಾವುದಿಲ್ಲ. ಬಿಸಿ ಬಿಸಿ ಹಪ್ಪಳ, ಸೋಂಟೆ ಮೊದಲಾದವುಗಳನ್ನು ಸವಿಯುತ್ತಾ, ಹೊರಗಡೆ ಧಾರಾಕಾರವಾಗಿ ಸುರಿಯುವ ಮಳೆಯನ್ನು ಆನಂದಿಸುವ ಖುಷಿ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅದೆಷ್ಟೇ ಒತ್ತಡಗಳಿರಲಿ ಆ ಕ್ಷಣ ಅವೆಲ್ಲವುಗಳೂ ಮರೆತು ಹೋಗುತ್ತದೆ. ಹಲಸಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ.
ಇದರ ಉತ್ಪನ್ನಗಳ ಕುರಿತು ಮತ್ತಷ್ಟು ಸಂಶೋಧನೆಗಳಾಗುತ್ತಿವೆ ಎಂಬುದು ಹಲಸು ಪ್ರಿಯರಿಗೆ ಸಂತಸದ ವಿಚಾರ. ಹಲಸಿನ ಐಸ್ಕ್ರೀಂ, ಚಾಕಲೇಟ್, ಮಿಲ್ಕ್ ಶೇಖ್ ಮೊದಲಾದ ಬೇಕರಿ ಉತ್ಪನ್ನಗಳೊಂದಿಗೆ ಲಾಲಿಪಪ್ ಕೂಡ ಲಭ್ಯವಿದೆಯಂತೆ!
ಒಂದು ಹಲಸಿನ ಹಣ್ಣು ಸುಮಾರು ಐದು ಕಿಲೋಗ್ರಾಂಗಳಿಂದ ಮೂವತ್ತೈದು ನಲುವತ್ತು ಕಿಲೋಗ್ರಾಂಗಳ ವರೆಗೂ ತೂಗುತ್ತದೆ. ಜನವರಿ ತಿಂಗಳ ಆರಂಭದಲ್ಲಿ ಎಳಸು ಹಲಸು ಅಥವಾ ಹಲಸಿನ ಗುಜ್ಜೆ ಕಿಲೋಗ್ರಾಂಗಳಿಗೆ 30ರಿಂದ35 ರೂಪಾಯಿಗಳಿಗೆ ಮಾರಾಟವಾಗುತ್ತದೆ. ಪೂರೈಕೆ ಹೆಚ್ಚಿದಾಗ ಬೆಲೆ 25 ರೂಪಾಯಿಗಳಿಗೆ ಇಳಿದದ್ದೂ ಇದೆ. ಬಿಡಿಸಿದ ತೊಳೆಗಳಿಗೆ ಕಿಲೋಗ್ರಾಂಗಳಿಗೆ ಸಾಮಾನ್ಯವಾಗಿ 100-120 ರೂಪಾಯಿಗಳಿರುತ್ತದೆ. ಈಗಂತೂ ಪೇಟೆಗಳಲ್ಲಿ ಪೆಟ್ಟಿಗೆ ಸೇರಿ ತೊಳೆಗೆ 5 ರೂ ನಂತೆ ಮಾರಾಟವಾಗುವ ಹಲಸಿನ ಹಣ್ಣನ್ನು ನೋಡಬಹುದು. ಆನ್ಲೈನ್ ಮಾಟುಕಟ್ಟೆಯಲ್ಲಂತೂ ಹಲಸಿಗೆ ಚಿನ್ನದ ಬೆಲೆ ಬಂದಿದೆ!
ಆರೋಗ್ಯ ಭಾಗ್ಯ…
ಹಲಸಿನ ಹಣ್ಣು ತಿಂದರೆ ಕೆಲವು ಗಂಟೆಗಳ ವರೆಗೆ ಹಸಿವಿನ ಭಯವಿಲ್ಲ. ಇದೊಂದು ವಿಷ ರಹಿತ ಹಣ್ಣು. ಇದರಲ್ಲಿ ವಿಟಮಿನ್ ಸಿ ಮೊದಲಾದ ಅಂಶಗಳೊಂದಿಗೆ ಅನೇಕ ಔಷಧೀಯ ಗುಣಗಳಿವೆ. ಹೀಗಾಗಿ ವೈರಸ್ ಹಾಗೂ ಬ್ಯಾಕ್ಟೀರಿಯಾ ಸೋಂಕಿನಿಂದ ರಕ್ಷಿಸುತ್ತದೆ. ಇದಕ್ಕೆ ರಕ್ತದೊತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯವಿದೆ. ಪೈಬರ್ನ ಗುಣಗಳು ಅಧಿಕವಾಗಿರುವ ಕಾರಣ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಕಾರಿ. ಅಲ್ಸರ್, ಮಧುಮೇಹ, ಕ್ಯಾನ್ಸರ್ ಹಾಗೂ ಇತರ ಜೀರ್ಣಾಂಗ ಸಂಬಂಧೀ ತೊಂದರೆಗಳ ನಿಯಂತ್ರಣಕ್ಕೆ ರಾಮಬಾಣ.
ಹಲಸಿನ ಹಣ್ಣಿನ ಸಿಪ್ಪೆ ಪಶುಗಳಿಗೆ ಉತ್ತಮ ಆಹಾರ. ಕಟ್ಟಿಗೆ ಹಾಗೂ ಎಲೆಗಳನ್ನು ಹೋಮ ಹವನ ಮೊದಲಾದ ಪೂಜಾ ವಿಧಿಗಳಿಗೆ ಬಳಸುತ್ತಾರೆ.