ಬೆಂಗಳೂರು; ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್ , ಕೆ.ಆರ್.ಪೇಟೆಯಲ್ಲಿ ಬಿಜೆಪಿಯ ನಾರಾಯಣಗೌಡ , ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಗೆಲುವಿನ ನಗೆ ಬೀರಿದ್ದಾರೆ.
ಈ ಕುರಿತು ರಾಜ್ಯ ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಹೊರಬೀಳಬೇಕಿದೆ. ಚಿಕ್ಕಬಳ್ಳಾಪುರದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದಂತಾಗಿದೆ.
ಹುಣಸೂರು ಕಾಂಗ್ರೆಸ್ ನ ಎಸ್.ಪಿ.ಮಂಜುನಾಥ್ 25,147 ಮತಗಳ ಅಂತರದಿಂದ ಭಾರಿ ಗೆಲುವು ದಾಖಲಿಸಿದ್ದು, ಅನರ್ಹ ಶಾಸಕ ಎಚ್. ವಿಶ್ವನಾಥ್ ಗೆ ಹೀನಾಯ ಸೋಲು ಎದುರಾಗಿದೆ.
ಯಶವಂತಪುರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮತ್ತೆ ಹಣಾಹಣಿ ಏರ್ಪಟ್ಟಿದ್ದು, ಬಿಜೆಪಿ ಸುಮಾರು 2 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದೆ.
ಉಳಿದಂತೆ ಮಹಾಲಕ್ಷ್ಮೀ ಲೇಔಟ್ ನಲ್ಲಿ ಬಿಜೆಪಿ ಗೋಪಾಲಯ್ಯ, ಕೆ.ಆರ್.ಪುರದಲ್ಲಿ ಭೈರತಿ ಬಸವರಾಜು, ವಿಜಯನಗರದಲ್ಲಿ ಆನಂದ್ ಸಿಂಗ್, ಗೋಕಾಕದಲ್ಲಿ ರಮೇಶ್ ಜಾರಕಿಹೊಳಿ, ಅಥಣಿಯಲ್ಲಿ ಮಹೇಶ್ ಕುಮಟಳ್ಳಿ, ಕಾಗವಾಡದಲ್ಲಿ ಶ್ರೀಮಂತ್ ಪಾಟೀಲ್, ಹಿರೇಕೇರೂರಿನಲ್ಲಿ ಬಿ.ಸಿ.ಪಾಟೀಲ್, ರಾಣೆಬೆನ್ನೂರಿನಲ್ಲಿ ಅರುಣ್ ಕುಮಾರ್ ಪೂಜಾರ ಮುನ್ನಡೆ ಸಾಧಿಸಿದ್ದಾರೆ.
ಶಿವಾಜಿನಗರದಲ್ಲಿ ಕಾಂಗ್ರೆಸ್ ನ ರಿಜ್ವಾದ್ ಅರ್ಷದ್,ಮುನ್ನಡೆಯಲ್ಲಿದ್ದಾರೆ. ಹೊಸಕೋಟೆಯ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಮುಂದಿದ್ದಾರೆ.