ಹುಬ್ಬಳ್ಳಿ: ನಮ್ಮನ್ನು ನಂಬಿ ಅನರ್ಹ ಶಾಸಕರು ಮೂರ್ಖರು, ಹುಚ್ಚರು ಆಗಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ಉಪಚುನಾವಣೆಯ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದಲ್ಲಿರಬೇಕಾಗಿದ್ದ ನಾವು ಅವರ ತ್ಯಾಗದಿಂದಾಗಿ ಆಡಳಿತ ಪಕ್ಷದಲ್ಲಿದ್ದೇವೆ. ಅವರ ಈ ತ್ಯಾಗವನ್ನೂ ಮರೆತು ಪಕ್ಷದ ಮುಖಂಡರು ಅನರ್ಹರ ಬಗ್ಗೆ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನರ್ಹರ ಪರ ಇನ್ನೆರಡು ದಿನಗಳಲ್ಲಿ ಸುಪ್ರೀಂ ತೀರ್ಪು ನೀಡುವ ಸಾಧ್ಯತೆಯಿದೆ. ಅನರ್ಹರು ಶೇ.90ರಷ್ಟು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ. ಆದರೆ, ಅನರ್ಹರ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸ್ಥಿತಿಯಲ್ಲಿ ನಾನಿಲ್ಲ. ಅವರನ್ನು ನಂಬಿಸಿ ರಾಜೀನಾಮೆ ಕೊಡಿಸಿ ತಪ್ಪು ಮಾಡಿದೆ ಎನಿಸುತ್ತಿದೆ ಎಂದು ನೋವು ಹೊರಹಾಕಿದರು. ನನಗೆ ಸಿಎಂಗಿರಿ ಬೇಕಾಗಿಲ್ಲ ಎಂದೂ ಬಿಎಸ್ ವೈ ಈ ಸಂದರ್ಭದಲ್ಲಿ ಹೇಳಿದರು.