ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ನಂತರ ರಾಜ್ಯದಲ್ಲೂ ಪ್ರತಿಭಟನೆ ಕಾವು ಪಡೆಯುತ್ತಿದೆ. ಮಂಗಳೂರಿನಲ್ಲಿ ಬುಧವಾರ ಕೇರಳ ಮೂಲದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯವ್ಯಾಪಿ ಗುರುವಾರ(ಡಿ.19) ಬೆಳಗ್ಗೆ 6 ರಿಂದ ಡಿ.21ರ ತಡರಾತ್ರಿ 12 ವರೆಗೆ ನಿಷೇಧಾಜ್ಞೆ ವಿಧಿಸಿ ಪೊಲೀಸ್ ಇಲಾಖೆ ಆದೇಶಿಸಿದೆ.
ಶಾಲಾ-ಕಾಲೇಜುಗಳು, ಸರ್ಕಾರಿ, ಖಾಸಗಿ ಸಂಸ್ಥೆಗಳ ನೌಕರರಿಗೆ ಈ ನಿಷೇಧಾಜ್ಞೆ ಅನ್ವಯವಾಗುವುದಿಲ್ಲ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಮರ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೆಕ್ಷನ್ 144 ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಯಾವುದೇ ಪ್ರತಿಭಟನೆಗಳಿಗೆ ಪೋಲೀಸರು ಅನುಮತಿ ನೀಡುವುದಿಲ್ಲ ಎಂದು ಪಾಂಡೆ ತಿಳಿಸಿದರು.
ರಾಜಧಾನಿಯಲ್ಲೂ ನಿಷೇಧಾಜ್ಞೆ :
ಬುಧವಾರ ರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಶಾಂತಿ ಕಾಪಾಡುವ ಸಲುವಾಗಿ ಮೂರು ದಿನಗಳ ಕಾಲ 144 ಸೆಕ್ಷನ್ ನಿಷೇಧಾಜ್ಞೆ ಆದೇಶ ಹೊರಡಿಸಲಾಗಿದೆ ಎಂದರು.