ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಪರವಾಗಿ ಹಿರಿಯ ಸಾಹಿತಿ ಡಾ.ಎಸ್ ಎಲ್ ಭೈರಪ್ಪ ಮಾತನಾಡಿದ್ದು, ಈ ಕಾಯ್ದೆಗಳ ಜಾರಿಯಿಂದ ಯಾರಿಗೂ ತೊಂದರೆಯಿಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಸನ್ಯಾಸಿಯಿದ್ದಂತೆ. ಅವರಿಗೆ ಸ್ವಂತದ್ದು ಅಂತಾ ಏನೂ ಇಲ್ಲ. ಅವರನ್ನು ಪ್ರಧಾನಿ ಪಟ್ಟದಿಂದ ಕೆಳಗಿಳಿಸುವ ಏಕೈಕ ಉದ್ದೇಶದಿಂದ ಪ್ರತಿಪಕ್ಷಗಳು ಅಪಪ್ರಚಾರ ನಡೆಸುತ್ತಿವೆ ಎಂದು ಕಿಡಿಕಾರಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಹಿಂದೂ ಮುಸ್ಲಿಂ ನಡುವೆ ಒಡೆದು ಆಳುವ ನೀತಿ ಅನುಸರಿಸಿದರು. ಸ್ವಾತಂತ್ರ್ಯಾನಂತರ ಜವಾಹರಲಾಲ್ ನೆಹರೂ ಕೂಡ ಅದೇ ತಂತ್ರ ಅನುಸರಿಸಿದರು. ಕಾಂಗ್ರೆಸ್ ಪಕ್ಷ ಈಗಲೂ ಅದನ್ನೇ ಮಾಡುತ್ತಿದೆ. ಮುಸ್ಲಿಮರನ್ನು ಓಟ್ ಬ್ಯಾಂಕ್ ಆಗಿ ಸೃಷ್ಟಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಲ್ಲಿ ‘ಫ್ರೀ ಕಾಶ್ಮಿರ್’ ಪೋಸ್ಟರ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬೇರೆ ವಿಶ್ವವಿದ್ಯಾಲಯಗಳ ಗಾಳಿ ಮೈಸೂರಿಗೂ ಬೀಸಿದೆ. ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಜನರ ತೆರಿಗೆ ಹಣದಿಂದ ವಿವಿಗಳು ನಡೆಯುತ್ತಿವೆ. ಇದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಪ್ರತಿಭಟನೆ, ಧಿಕ್ಕಾರ ಕೂಗಿದರೆ ಏನು ಲಾಭ? ಸರಿಯಾದ ವಿದ್ಯಾಭ್ಯಾಸದ ಬಗ್ಗೆ ಚಿಂತಿಸಬೇಕು ಎಂದರು.
ಮೋದಿ ಸನ್ಯಾಸಿಯಿದ್ದಂತೆ; ಸಿಎಎ ಪರ ಸಾಹಿತಿ ಭೈರಪ್ಪ ಮಾತು
Follow Us