ನವದೆಹಲಿ: ರಾಜಕೀಯ ಕುರುಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮುಖದಲ್ಲಿ ಮಂದಹಾಸ ಮನೆ ಮಾಡಿದೆ. ಉಪ ಚುನಾವಣೆ ಘೋಷಣೆಯಾದ ದಿನದಿಂದಲೂ ಅಹರ್ನಿಶಿ ದುಡಿದ ಯಡಿಯೂರಪ್ಪ ಗುರಿ ತಲುಪಿದ್ದಾರೆ. ಬಿಜೆಪಿ ಸರ್ಕಾರವನ್ನು ಪತನದಿಂದ ಪಾರು ಮಾಡಿದ್ದಾರೆ. ಹೆಚ್ಚು ಕಡಿಮೆ ಸೇನಾಧಿಪತಿಯಂತೆ ಕರ್ತವ್ಯ ನಿರ್ವಹಿಸಿದ್ದ ಯಡಿಯೂರಪ್ಪ ವಿಜಯದ ಶಂಖನಾದ ಮೊಳಗಿಸಿ ರಥದಿಂದ ಇಳಿದಿದ್ದಾರೆ.
ಇಷ್ಟು ಅಭೂತಪೂರ್ವ ಗೆಲುವಿಗೆ ಕಾರಣರಾದ ಬಿಎಸ್ ವೈಗೆ ಬಿಜೆಪಿ ಹೈಕಮಾಂಡ್ ಯಾವ ಉಡುಗೊರೆ ನೀಡಲಿದೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಆರಂಭದ ದಿನಗಳಲ್ಲಿ ಯಡಿಯೂರಪ್ಪ ತುಂಬಾ ವಿಚಲಿತರಾಗಿದ್ದರು. ಹಲವು ನಿರ್ಬಂಧಗಳಿಂದಾಗಿ ಅವರು ಹೆಚ್ಚು ಕಡಿಮೆ ರೋಸಿ ಹೋಗಿದ್ದರು. ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ತಂತಿಯ ಮೇಲಿನ ನಡಿಗೆಯ ಉದಾಹರಣೆಯನ್ನು ಕೂಡ ನೀಡಿದ್ದರು.
ಆದರೆ ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಹೈ ಕಮಾಂಡ್ ಗೆ ಯಡಿಯೂರಪ್ಪ ಅವರ ನಿಜವಾದ ಶಕ್ತಿಯ ಅರಿವಾಯಿತು. ಯಡಿಯೂರಪ್ಪ ಬಿಜೆಪಿ ಹೈ ಕಮಾಂಡ್ ಬಳಿ ಕೇಳಿದ್ದು ಒಂದೇ ಒಂದು ಬೇಡಿಕೆ. ಸ್ವಲ್ಪ ಸ್ವಾತಂತ್ರ್ಯ ಕೊಡಿ. ಚಿಕ್ಕಪುಟ್ಟ ವಿಷಯಗಳಲ್ಲಿ ಹಸ್ತಕ್ಷೇಪ ಬೇಡ. ರಾಷ್ಟ್ರೀಯ ವಿಷಯದಲ್ಲಿ ಸಮಾಲೋಚನೆ ಇರಲಿ. ಬೇಡ ಎಂದು ಹೇಳಲ್ಲ. ಉಳಿದಂತೆ ರಾಜ್ಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಮುಕ್ತವಾಗಿ ವ್ಯವಹರಿಸಲು ಸ್ವಾತಂತ್ರ್ಯ ಕೊಡಿ..
ಇದೀಗ ವಿಧಾನಸಭೆ ಫಲಿತಾಂಶ ಹೊರಹೊಮ್ಮಿದೆ. ಸ್ಥಿರ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದರ ಹಿಂದೆ ಅಡಗಿರುವುದು ಯಡಿಯೂರಪ್ಪ ಅವರ ನಿರಂತರ ಪ್ರಯತ್ನ. ಇದನ್ನು ಪುರಸ್ಕರಿಸಿ ಹೈ ಕಮಾಂಡ್
ಯಡಿಯೂರಪ್ಪ ಅವರಿಗೆ ಭರ್ಜರಿ ಉಡುಗೊರೆ ನೀಡಲಿದೆಯೇ.. ಇದು ಸದ್ಯಕ್ಕೆ ಎಲ್ಲರ ಮುಂದಿರುವ ಪ್ರಶ್ನೆ. ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಷಯಗಳಲ್ಲಿ ಬಿಎಸ್ ವೈ ಸ್ವಾತಂತ್ರ್ಯ ಬಯಸುತ್ತಿದ್ದಾರೆ. ಇದು ಗುಟ್ಟಾಗಿ ಉಳಿದಿರುವ ವಿಷಯವಲ್ಲ.. ಮುಂದಿನ ಬೆಳವಣಿಗೆ ಯಡಿಯೂರಪ್ಪ ಅವರ ರಾಜಕೀಯ ಸ್ವಾತಂತ್ರ್ಯದ ಗುರಿಗಳನ್ನು ನಿರ್ಧರಿಸಲಿವೆ.