ಬೆಂಗಳೂರು: ವಯೋಸಹಜ ಅನಾರೋಗ್ಯದಿಂದ ಹಿರಿಯ ಸಾಹಿತಿ, ವಿಮರ್ಶಕ ಪ್ರೊ.ಎಲ್.ಎಸ್.ಶೇಷಗಿರಿ ರಾವ್ (95) ಅವರು ಶುಕ್ರವಾರ ಕೊನೆಯುಸಿರೆಳೆದರು.
ಶುಕ್ರವಾರ ಬೆಳಗ್ಗೆ ಜೆಪಿ ನಗರದ ಮಾರೇನಹಳ್ಳಿಯಲ್ಲಿರುವ ಸ್ವಗೃಹದಲ್ಲಿ ಅವರು ನಿಧನರಾದರು.
ಭಾರತೀಯ ವಿದ್ಯಾ ಭವನಕ್ಕೆ ಮಹಾಭಾರತ ಪುಸ್ತಕ ಸಂಪಾದನೆ, ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಭಾರತ ಭಾರತಿ ಮೊದಲ ಸರಣಿಯ 510 ಪುಸ್ತಕಗಳ ಸಂಪಾದಕರಾಗಿದ್ದರು. ಪ್ರೊ. ಎಲ್ ಎಸ್ ಶೇಷಗಿರಿ ರಾವ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಸಿದ್ಧ ಸಾಹಿತ್ಯ ವಿಮರ್ಶಕರು ಮತ್ತು ಬರಹಗಾರರು. ಕಾಲೇಜು ಮತ್ತು ವಿಶ್ವವಿದ್ಯಾಲಯದ ಮಟ್ಟದಲ್ಲಿ 41 ವರ್ಷ ಕಾಲ ಇಂಗ್ಲಿಷ್ ಕಲಿಸಿದ ನಂತರ ಇಂಗ್ಲಿಷ್ ಸಾಹಿತ್ಯದ ಇತಿಹಾಸದ ಬಗ್ಗೆ ಕನ್ನಡದಲ್ಲಿ ಇಂಗ್ಲಿಷ್ ಸಾಹಿತ್ಯ ಚರಿತ್ರೆ ಎಂಬ ಸಮಗ್ರ ಕೃತಿಯನ್ನು ಬರೆದಿದ್ದಾರೆ.ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷರಾಗಿದ್ದ ಪ್ರೊಫೆಸರ್ ರಾವ್ ಅವರು ಕರ್ನಾಟಕದಲ್ಲಿ ಮಕ್ಕಳ ಸಾಹಿತ್ಯವನ್ನು ಬೆಳೆಸಲು ಪ್ರಯತ್ನಿಸಿದ್ದಾರೆ.